ಜಿಲ್ಲೆ

ಸ್ಥಳೀಯ ಸಂಸ್ಥೆಗಳಿಗೆ ಖಾಸಗಿ ಬಡಾವಣೆ ಹಸ್ತಾಂತರ

ಆರ್.ಕೃಷ್ಣ ಮೈಸೂರು

ಲೋಕಾಯುಕ್ತ, ಇ.ಡಿ. ಸೇರಿದಂತೆ ಇನ್ನಿತರ ವಿಶೇಷ ತಂಡದ ತನಿಖೆಯಿಂದ ನಲುಗಿರುವ ಮುಡಾದಲ್ಲಿ ಖಾಸಗಿ ಬಡಾವಣೆ ನಿವೇಶನದಾರರು ಅನುಭವಿಸುತ್ತಿರುವ ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದು ನಿರ್ಮಾಣಗೊಂಡಿದ್ದ ಖಾಸಗಿ ಬಡಾವಣೆಗಳ ನಿವೇಶನದಾರರಿಗೆ ಖಾತೆ ಅಗದೆ ತೊಂದರೆ ಅನುಭವಿಸುತ್ತಿದ್ದರು. ಇದರಿಂದ ಮನೆ ನಿರ್ಮಿಸುವವರು, ಕೊಳ್ಳುವವರು, ಮಾರುವರಿಗೆ ದಿಕ್ಕು ತೋಚದಂತೆ ಅಗಿತ್ತು. ಹೀಗಾಗಿ ಕಳೆದ ನಾಲ್ಕೈದು ತಿಂಗಳಿಂದ ನಿವೇಶನದಾರರು, ಮುಡಾ ಕಚೇರಿಗೆ ಅಲೆಯುವಂತಾಗಿತ್ತು.

ತನ್ನ ವ್ಯಾಪ್ತಿ ಮೀರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಖಾಸಗಿ ಬಡಾವಣೆಯಲ್ಲಿನ ನಿವೇಶನಗಳನ್ನು ಖಾತೆ ಮಾಡಿಕೊಟ್ಟು ಕಂದಾಯವನ್ನು ಪಡೆದುಕೊಳ್ಳುತ್ತಿತ್ತು. ಆದರೆ ಖಾತೆ, ಕಂದಾಯ ಮಾಡುವುದು ಮುಡಾ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳೇ ಮಾಡಬೇಕು ಎಂದು ಇಲಾಖೆ ನಿರ್ದೇಶನ ನೀಡಿತ್ತು. ಇದರಿಂದ ಮುಡಾದಲ್ಲಿ ಅನುಮೋದಿತ ಖಾಸಗಿ ಬಡಾವಣೆಯ ನಿವೇಶನದಾರರು ಮಾಡಿಸಿಕೊಳ್ಳುತ್ತಿದ್ದ, ಖಾತೆ, ಕಂದಾಯ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಜತೆಗೆ ಖಾಸಗಿ ಬಡಾವಣೆಗಳ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ, ಪಟ್ಟಣ, ನಗರಸಭೆ, ನಗರಪಾಲಿಕೆಗಳು ಬಡಾವಣೆ ಹಸ್ತಾಂತರಗೊಳ್ಳದೆ ಖಾತೆ, ಕಂದಾಯ ಪ್ರಕ್ರಿಯೆ ನಡೆದಿರಲಿಲ್ಲ.

ಅಲ್ಲದೇ ಕೆಲ ಖಾಸಗಿ ಬಡಾವಣೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿಲ್ಲ.ಯಥಾ ಸ್ಥಿತಿ ವಶಪಡಿಸಿಕೊಂಡರೆ ಅಂತಹ ಬಡಾವಣೆಗಳ ನಿರ್ವಹಣೆ ನಮ್ಮ ಹೆಗಲಿಗೆ ಬೀಳಲಿದೆ ಎಂದು ಖಾಸಗಿ ಬಡಾವಣೆ ಸುರ್ಪದಿಗೆ ತೆಗೆದುಕೊಳ್ಳಲು ಸ್ಥಳೀಯ ಸಂಸ್ಥೆಗಳು ಹಿಂಜರಿದವು.

ಹಸ್ತಾಂತರಕ್ಕೆ ಸಭೆಯಲ್ಲಿ ನಿರ್ಣಯ:

ಮುಡಾ ಅನುಮೋದನೆ ನೀಡಿ ಅಭಿವೃದ್ಧಿಪಡಿಸಿರುವ ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಗುರುವಾರ ಆಯೋಜಿಸಿದ್ದ ಮುಡಾ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪೂರ್ಣವಾಗಿ ಮೂಲಸೌಲಭ್ಯದಿಂದ ಅಭಿವೃದ್ಧಿಗೊಂಡಿರುವ ಬಡಾವಣೆಗಳನ್ನು ಹಸ್ತಾಂತರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಂತೆ ಮೊದಲ ಹಂತದಲ್ಲಿ ಮುಡಾ ಅನುಮೋದಿತ 202 ಖಾಸಗಿ ಬಡಾವಣೆಗಳ 15,085 ನಿವೇಶನಗಳನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಬಡಾವಣೆ ಹಸ್ತಾಂತರ ಪ್ರಕ್ರಿಯೆ ಸುಲಲಿತವಾಗಿ ನಡೆಯಲು ತಾಂತ್ರಿಕ ಶಾಖೆ, ನಗರ ಯೋಜನಾ ಶಾಖೆಯ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದರಂತೆ ಮೈಸೂರು ನಗರಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ, ಬೋಗಾದಿ ಪಟ್ಟಣ ಪಂಚಾಯಿತಿ ಉಳಿದಂತೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.

ಮೈಸೂರು ನಗರಪಾಲಿಕೆ ವ್ಯಾಪ್ತಿಗೆ 7 ಬಡಾವಣೆಗಳ 394 ನಿವೇಶನ, ಹೂಟಗಳ್ಳಿ ನಗರಸಭೆ ವ್ಯಾಪ್ತಿಯ 6 ಬಡಾವಣೆಗಳ 119 ನಿವೇಶನ, ಶ್ರೀರಾಂಪುರ ಪಟ್ಟಣ ಪಂಚಾಯಿತಿಯ 20 ಬಡಾವಣೆಗಳ 1059 ನಿವೇಶನ, ಕಡಕೊಳ ಪಟ್ಟಣ ಪಂಚಾಯಿತಿಯ 18 ಬಡಾವಣೆಗಳ 1412 ನಿವೇಶನ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ 22 ಬಡಾವಣೆಗಳ 783 ನಿವೇಶನ, ಬೋಗಾದಿ ಪಟ್ಟಣ ಪಂಚಾಯಿತಿಯ 30 ಬಡಾವಣೆಗಳ 2169 ನಿವೇಶನಗಳನ್ನು ಹಸ್ತಾಂತರಗೊಳ್ಳಲಿವೆ.

ಅಲ್ಲದೇ ವರುಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಬಡಾವಣೆಗಳ 1400, ಮೊಸಂಬಾಯನಹಳ್ಳಿ ಗ್ರಾ.ಪಂ.ನ 7 ಬಡಾವಣೆಗಳ 915, ವಾಜಮಂಗಲ ಗ್ರಾ.ಪಂ.ನ 23 ಬಡಾವಣೆಗಳ 1645, ನಾಗನಹಳ್ಳಿ ಗ್ರಾ.ಪಂ.ನ 4 ಬಡಾವಣೆಗಳ 283, ಸಿಂಧುವಳ್ಳಿ ಗ್ರಾ.ಪಂ.ನ 8 ಬಡಾವಣೆಗಳ 335 ನಿವೇಶನಗಳು ಹಸ್ತಾಂತರಗೊಳ್ಳಲಿವೆ.

ಉದ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಬಡಾವಣೆಯಿಂದ 105 ನಿವೇಶನ, ಧನಗಳ್ಳಿ ಗ್ರಾ.ಪಂ.ನ 11 ಬಡಾವಣೆಗಳ 1050 ನಿವೇಶನ, ಬೀರಿಹುಂಡಿ ಗ್ರಾ.ಪಂ.ನ 5 ಬಡಾವಣೆಗಳ 398, ಇಲವಾಲ ಗ್ರಾ.ಪಂ.ನ 15 ಬಡಾವಣೆಗಳ 1573, ಆಲನಹಳ್ಳಿ ಗ್ರಾ.ಪಂ.ನ 2 ಬಡಾವಣೆಯ 76 ನಿವೇಶನ, ಹುಲಿಕೆರೆ ಗ್ರಾ.ಪಂ.ನ 7 ಬಡಾವಣೆಗಳ 1220 ನಿವೇಶನ, ಗೋಪಾಲಪುರ ಗ್ರಾ.ಪಂ.ನ 2 ಬಡಾವಣೆಯ 80 ನಿವೇಶನ, ನಾಗವಾಲ ಗ್ರಾ.ಪಂ.ನ 2 ಬಡಾವಣೆಗಳ 69 ನಿವೇಶನಗಳನ್ನು ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ

ಮುಡಾ ಅನುಮೋದನೆ ಮಾಡಿರುವ ಖಾಸಗಿ ಬಡಾವಣೆ ಸೇರಿದಂತೆ ಮುಡಾ ನಿರ್ಮಿತ ಬಡಾವಣೆಗಳ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಲಾಗುತ್ತಿದೆ. ಹೀಗಾಗಿ ಖಾತೆ, ಕಂದಾಯ ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಅಲ್ಲಿಯೇ ನಡೆಯಲಿವೆ. ಮೊದಲ ಹಂತದಲ್ಲಿ 202 ಬಡಾವಣೆಗಳ 15,085 ನಿವೇಶನಗಳನ್ನು ಹಸ್ತಾಂತರಿಸಲಾಗಿದ್ದು, ಮುಂದಿನ ಹಂತದಲ್ಲಿ ಉಳಿದ ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.

ಎ.ಎನ್. ರಘುನಂದನ್

ಆಯುಕ್ತರು, ಮುಡಾ