ಜಿಲ್ಲೆ

ಕರ್ನಾಟಕ ವಿವಿಗೆ ಕಲಾವಿದ ಕಲಾಕೃತಿಗಳ ಹಸ್ತಾಂತರ

ಮೈಸೂರು: ಕಲಾಕೃತಿಗಳ ರಚನೆ, ಸಾಹಿತ್ಯ, ಸಂಶೋಧನೆಗೆ ಸೃಜನಶೀಲತೆ ಮುಖ್ಯ. ಚಿತ್ರಗಳನ್ನು ಗ್ರಹಿಸಿ, ಆಸ್ವಾದಿಸಿ ನೋಡುವ ಕಲೆ ಅಪರೂಪದ ಸಾಧನೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.
ಶ್ರೀನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ, ಮೈಸೂರು ಆರ್ಟ್ ಗ್ಯಾಲರಿಯಿಂದ ನಗರದ ಶ್ರೀನಟರಾಜ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅವರ ವಚನಾಧಾರಿತ ಕಲಾಕೃತಿಗಳನ್ನು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಶ್ರೀಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ. ಕುಂದಗೋಳ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಹೃದಯದ ಭಾವನೆ, ಚಿಂತನಾಶೀಲತೆ, ಧನಾತ್ಮಕ ಭಾವ ಇದ್ದಲ್ಲಿ ಮಾತ್ರ ಕಲಾಕೃತಿಗಳ ರಚನೆ ಸಾಧ್ಯ. ಸಾವಿರ ಪದಗಳು ಹೇಳುವುದನ್ನು ಒಂದು ಕಲಾಕೃತಿ ಹೇಳಬಲ್ಲದು ಎಂದರು.
ಕಲೆ ಎನ್ನುವುದು ತಪಸ್ವಿಗಳಿಗೆ, ಕಲಾಯೋಗಿಗಳಿಗೆ, ಮಾತ್ರ ಒಲಿಯುವಂಥದ್ದು. 6 ದಶಕಗಳಿಂದಲೂ ಮಿಗಿಲಾಗಿ ಕಲಾ ಸೇವೆಯಲ್ಲಿ ತೊಡಗಿರುವ ಎಲ್. ಶಿವಲಿಂಗಪ್ಪ ಒಬ್ಬ ಕಲಾತಪಸ್ವಿಯೇ ಆಗಿದ್ದಾರೆಂದು ಅವರು ಬಣ್ಣಿಸಿದರು.
ಮ್ಯೂಸಿಯಂ ಮಾಡುವ ಉದ್ದೇಶ :
ಕಲಾಕೃತಿಗಳನ್ನು ಸ್ವೀಕರಿಸಿದ ಕರ್ನಾಟಕ ವಿವಿ ಶ್ರೀಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ. ಕುಂದಗೋಳ ಮಾತನಾಡಿ, ವಚನಗಳು ನಮಗೆ ದೀಪ. ಬಸವೇಶ್ವರ ಪೀಠವು 54 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 1981 ರಿಂದ ಡಿಪ್ಲೋಮಾ, ಇತ್ತೀಚಿನ ವರ್ಷಗಳಲ್ಲಿ ಓಪನ್ ಎಲೆಕ್ಟ್ರಿವ್ ಕೋರ್ಸ್ ನಡೆಸುತ್ತಿದೆ. ಈವರೆಗೆ 80 ಗ್ರಂಥ ಪ್ರಕಟಿಸಿದೆ. ವಚನಾಧಾರಿತ ಕಲಾಕೃತಿಗಳ ಮ್ಯೂಸಿಯಂ ಮಾಡಲಾಗುವುದು ಎಂದು ಹೇಳಿದರು.
ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಕಲಾಕೃತಿಗಳ ಸಂರಕ್ಷಣೆ ಬಹಳ ಮುಖ್ಯ. ಯುವಕರು ಈ ಕಲಾಕೃತಿಗಳನ್ನು ವೀಕ್ಷಿಸಿ, ಬಸವಾದಿ ಶರಣರು ಹಾಗೂ ವಚನ ಸಾಹಿತ್ಯದ ಬಗ್ಗೆ ಅರಿಯಬೇಕು ಎಂದರು.
ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಉಪನ್ಯಾಸಕ ದಿಲೀಪ್, ಮೈಸೂರು ಆರ್ಟ್ ಗ್ಯಾಲರಿ ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ ಇದ್ದರು.