ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ಹೊಸಗಾವಿ ಗ್ರಾಮದ ಮಾಸಾಶನ ಫಲಾನುಭವಿ ಕಲ್ಯಾಣಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮಂಜೂರಾದ ವಾತ್ಸಲ್ಯ ಮನೆಯನ್ನು ಇತ್ತೀಚೆಗೆ ಹಸ್ತಾಂತರ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಮಾತನಾಡಿ, ಅಸಹಾಯಕ ಕುಟುಂಬಗಳನ್ನು ಗುರುತಿಸಿ, ಪ್ರತಿ ತಿಂಗಳ ಮಾಸಾಶನ ಸೌಲಭ್ಯನೀಡಿ ಆಸರೆಯಾಗುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸೌಲಭ್ಯಗಳು ಜನರಿಗೆ ಸಾಕಷ್ಟು ರೀತಿಯಲ್ಲಿ ಅನುಕೂಲವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನ್‌ಮುಲ್ ಮಾಜಿ ನಿರ್ದೇಶಕ ಕುಮಾರ್‌ಕೊಪ್ಪ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ಅನುಕೂಲ ಕಲ್ಪಿಸುವ ಜತೆಗೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿದರು.
ಮೈಸೂರು ತರಬೇತಿ ಸಂಸ್ಥೆಯ ಪ್ರಾಂಶುಪಾಲ ದಿನೇಶ್ ನಾಮಫಲಕ ಅನಾವರಣ ಮಾಡಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ತೇಜಾವತಿ, ಮೇಲ್ವಿಚಾರಕರಾದ ಜಯರಾಮ್ ಇತರರು ಇದ್ದರು.