ಜಿಲ್ಲೆ

ಬೆಳ್ತಂಗಡಿಯಲ್ಲಿ ಕಂಪ್ಯೂಟರ್ ಹಸ್ತಾಂತರ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಬೆಳ್ತಂಗಡಿ ಸರ್ಕಾರಿ ಶಾಲೆಗಳಿಗೆ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಮತ್ತು ನುವೇರ್ ಸಿಸ್ಟಮ್ಸ್ ಎಲ್‌ಎಲ್‌ಪಿ ಸಾಫ್ಟ್‌ವೇರ್ ಕಂಪನಿ ಬೆಂಗಳೂರು ಸಹಭಾಗಿತ್ವದಲ್ಲಿ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಕಾಶಿಬೆಟ್ಟು ರೋಟರಿ ಸೇವಾ ಭವನದಲ್ಲಿ ನಡೆಯಿತು. ಬೆಳ್ತಂಗಡಿ ರೋಟರಿ ಸಂಸ್ಥೆ ತಾಲೂಕಿನ 12 ಶಾಲೆಗಳಿಗೆ 30 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದೆ. ತಾಲೂಕಿನ 2,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಕಂಪ್ಯೂಟರ್ ಖರೀದಿಗೆ 13,50,000 ರೂ.ವಿನಿಯೋಗಿಸಲಾಗಿದೆ. ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಯೂಟರ್ ವ್ಯವಸ್ಥೆ ಬೆಳ್ತಂಗಡಿಗೆ ಬಂದ ಆರಂಭದ ದಿನಗಳಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ದಿವಂಗತ ಡಾ.ಯಶೋವರ್ಮರು ಬೆಳ್ತಂಗಡಿಯಂತಹ ಹಳ್ಳಿಯ ಪರಿಸರದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಎಷ್ಟು ಮುಖ್ಯ ಎಂಬ ಸಲುವಾಗಿ ಕಾಲೇಜುಗಳ ಗ್ರಂಥಾಲಯದಲ್ಲಿ ಟ್ಯಾಬ್‌ಗಳ ಬಳಕೆ , ಕಂಪ್ಯೂಟರ್ ಲ್ಯಾಬ್‌ಗಳ ಸ್ಥಾಪನೆ ಇತ್ಯಾದಿ ದೂರದೃಷ್ಟಿತ್ವದ ಕಾರ್ಯಗಳನ್ನು ನೆನಪಿಸಿಕೊಂಡರು. ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ಸುಬ್ಬು ಕೃಷ್ಣನ್ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿದರು. ದಿಡುಪೆ ಕಡಿರುದ್ಯಾವರ ಸರಕಾರಿ ಶಾಲೆಗೆ ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯ ಕಿರಣ್ ಹೆಬ್ಬಾರ್ ಯು.ಪಿ.ಎಸ್ ಹಸ್ತಾಂತರಿಸಿದರು. ಬೆಳ್ತಂಗಡಿ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲು ಅನುಕೂಲ ಮಾಡಿಕೊಟ್ಟ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ಸುಬ್ಬು ಕೃಷ್ಣನ್ ಅವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಅಧ್ಯಕ್ಷೆ ಸುಪ್ರಿಯಾ ಖಾಂಡರಿ, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಪೂರಣ್ ವರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿದರು. ಬೆಳ್ತಂಗಡಿ ಶಾಲೆಗಳ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ವಲಯ ಸೇನಾನಿ ಮನೋರಮಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವೂ ವಂದಿಸಿದರು. ಕಂಪ್ಯೂಟರ್ ಸ್ವೀಕರಿಸಿದ ಶಾಲೆಗಳು ಬೆಳ್ತಂಗಡಿ ಶಾಲೆ -5, ಕೊಯ್ಯೂರು ಶಾಲೆ-3, ಹಳೇಪೇಟೆ ಶಾಲೆ -1, ಅಳದಂಗಡಿ ಶಾಲೆ-2, ಕಿರಿಯಾಡಿ ಶಾಲೆ-1, ಮಿತ್ತಬಾಗಿಲು ಶಾಲೆ-5, ಅರಸಿನಮಕ್ಕಿ ಶಾಲೆ-1, ದಿಡುಪೆ ಶಾಲೆ-2, ಬಂಗಾಡಿ ಶಾಲೆ -2, ಕೊಯ್ಯೂರು ಕಿ.ಪ್ರಾ.ಶಾಲೆ - 5, ನಿಟ್ಟಡೆ ಹಿ.ಪ್ರಾ.ಶಾಲೆ ವೇಣೂರು -2, ಕೊಯ್ಯೂರು ಶಾಲೆ ದೇವಸ್ಥಾನ -1 ಕಂಪ್ಯೂಟರ್ ಪಡೆದುಕೊಂಡಿದೆ.

ಬೆಳ್ತಂಗಡಿ ರೋಟರಿ ಸಂಸ್ಥೆಯು ಸ್ಕಾಲರ್‌ಷಿಪ್ ವಿತರಣೆ, ಶಾಲೆಗಳ ನವೀಕರಣ, ಶಾಲಾ ಕೊಠಡಿಗಳ ನಿರ್ಮಾಣ, ನೂತನ ಶೌಚಾಲಯದ ನಿರ್ಮಾಣದಂತಹ ಅನೇಕ ಸೇವಾ ಕಾರ್ಯಗಳನ್ನು ತಾಲೂಕಿನ ಸರ್ಕಾರಿ ಶಾಲೆಗಳಿಗೆ ಮಾಡುತ್ತಾ ಬಂದಿದೆ. ಇದೀಗ ಕಂಪ್ಯೂಟರ್ ವ್ಯವಸ್ಥೆಯನ್ನು ಶಾಲೆಗಳಿಗೆ ಕಲ್ಪಿಸಿ ಕೊಟ್ಟಿರುವುದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅತ್ಯಂತ ಸಂತಸ ತಂದಿದೆ. ರೋಟರಿ ಸಂಸ್ಥೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಲಾಖೆ ವತಿಯಿಂದ ಕೃತಜ್ಞತೆ ತಿಳಿಸುತ್ತೇವೆ. ತಾರಕೇಸರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ