ಜಿಲ್ಲೆ

ನೈಸರ್ಗಿಕ ವಸ್ತುಗಳಿಂದ ಕರಕುಶಲ ತರಬೇತಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲ ಬಳಸಿ ಕರಕುಶಲ ವಸ್ತುಗಳನ್ನು ಸಿದ್ಧಪಡಿಸಿ ಅವುಗಳಿಗೆ ಮಾರುಕಟ್ಟೆ ಕಲ್ಪಿಸುವವರೆಗೂ ಮಹಿಳಾ ಉದ್ಯಮಿಗಳಿಗೆ ಸಹಕಾರ ಒದಗಿಸಲು ಇಕೋ ಗ್ರೀನ್​ ಸಂಸ್ಥೆಯೊಂದಿಗೆ ರಾಜ್ಯದಲ್ಲಿ ವೇದಾ ಸಂಸ್ಥೆ ಕಾರ್ಯ ಮಾಡುತ್ತಿದೆ. ಇದೀಗ ಜಿಲ್ಲೆಯಲ್ಲಿ ಮಾರ್ಚ್​ನಲ್ಲಿ ತರಬೇತಿ ಆರಂಭಿಸಲಾಗುವುದು ಎಂದು ವೇದಾ ಸಂಸ್ಥೆ ಮುಖ್ಯಸ್ಥೆ ರತಿ ಶ್ರೀನಿವಾಸ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಕೋ ಗ್ರೀನ್​ ದೇಶದ 17 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳಾ ಉದ್ಯಮಿ ಅಥವಾ ಗುಂಪುಗಳಿಗೆ, ರೈತರಿಗೆ ಬಾಳೆ ನಾರಿನ ಚಾಪೆ, ತೆಂಗಿನ ಚಿಪ್ಪಿನ ಕರಕುಶಲ ಯೋಜನೆ, ಬಯೋಚಾರ್​ ತಯಾರಿಕೆ, ಖಸ್​ ಕೃಷಿ ಯೋಜನೆ, ಪೇಪರ್​ ಬ್ಯಾಗ್​ ಸಿದ್ಧಪಡಿಸುವ ಕರಕುಶಲತೆ ಹಾಗೂ ತಂತ್ರಜ್ಞಾನವನ್ನು ತರಬೇತಿ ಮೂಲಕ ನೀಡುವ ಕಾರ್ಯ ಮಾಡುತ್ತಿದೆ. ಇದೀಗ ಕರ್ನಾಟಕದಲ್ಲಿ ವೇದಾ ಸಂಸ್ಥೆ ಜೊತೆಗೂಡಿದೆ ಎಂದರು.

ಖಸ್​ ಎಂಬ ಹುಲ್ಲು ಮತ್ತು ಅದರ ಬೇರು ಔಷಧೀಯ ಮೌಲ್ಯ, ಪರಿಮಳದಲ್ಲಿ ಸಮೃದ್ಧವಾಗಿದೆ. ತೈಲ, ಸೌಂದರ್ಯವರ್ಧಕಗಳು, ಸಾಬೂನು, ಶಾಂಪೂ ಅಂತಹ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಂತಹ ಹಲವು ಕೃಷಿ ಉತ್ಪನ್ನ, ನೈಸರ್ಗಿಕ ಸಂಪನ್ಮೂಲ ಬಳಸಿ ವಸ್ತುಗಳನ್ನು ತಯಾರಿಸಿ ಅವರಿಗೆ ಮಾರುಕಟ್ಟೆ ಸಹ ಸೃಷ್ಟಿಸಲು ಮುಂದಾಗಿದ್ದೇವೆ. ಈ ಕುರಿತು ಮಾರ್ಚ್​ ಮೊದಲ ವಾರದಲ್ಲಿ ಧಾರವಾಡದಲ್ಲಿ ಆಸಕ್ತ ಮಹಿಳಾ ಉದ್ಯಮಿ, ಗುಂಪುಗಳಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ಉದ್ಯಮಿಗಳಾದ ಜ್ಯೋತಿ ಹಿರೇಮಠ, ಭಾರತಿ ಉಪಾಧ್ಯಾಯ, ತರಬೇತುದಾರ ಬಾಬು, ಪ್ರಕಾಶ ಹೂಗಾರ, ಇತರರು ಇದ್ದರು.