ಜಿಲ್ಲೆ

ಕೈ-ಕಮಲ ಕಾರ್ಯಕರ್ತರ ಮಧ್ಯೆ ವಾಗ್ವಾದ

ಬೆಳಗಾವಿ: ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಬಗ್ಗೆ ನೀಡಿದ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ಸಿಗರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ನಗರದಲ್ಲಿನ ಕಾಂಗ್ರೆಸ್ ಭವನಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಭವನದ ಎದುರಿನ ರಸ್ತೆ ಮೇಲೆ ಕುಳಿತು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಹೊರಗೆ ಬಂದು ಅವರ ಪ್ರತಿಯಾಗಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿ ಘೋಷಣೆ ಕೂಗಲಾರಂಭಿಸಿದರು.

ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭಗೊಂಡಿತು. ಅಮಿತ್ ಷಾ ಹೇಳಿಕೆಯ ಸಂಪೂರ್ಣ ವಿಡಿಯೋ ತುಣುಕನ್ನು ಹಾಕಿಲ್ಲ. ತಮಗೆ ಬೇಕಾದಷ್ಟು ಭಾಗದ ತುಣುಕು ಮಾತ್ರ ಬಳಸಿದ್ದಾರೆ.

ಬೇರೆಯೇ ರೀತಿಯಲ್ಲಿ ಅರ್ಥೈಸುವಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ತೀವ್ರತೆ ಅರಿತ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಲಕ್ಷ್ಮಣ ತಪಸಿ, ಈರಣ್ಣ ಅಂಗಡಿ, ಮಹಾಂತೇಶ ಚಿನ್ನಪ್ಪಗೌಡ್ರ, ಮಹಾದೇವ ಧರೆಣ್ಣವರ, ಧನಶ್ರೀ ದೇಸಾಯಿ, ಆನಂದ ಅತ್ತುಗೋಳ, ಯುವರಾಜ ಜಾಧವ, ಯಲ್ಲೇಶ್ ಕೋಲಕಾರ, ಪ್ರಸಾದ ದೇವರಮನಿ ಇತರರು ಇದ್ದರು.