ಹುಬ್ಬಳ್ಳಿ : ಇಲ್ಲಿನ ಮಜೇಥಿಯಾ ಫೌಂಡೇಷನ್ ವತಿಯಿಂದ ಉಚಿತ ಕೃತಕ ಕೈ, ಕಾಲು ಜೋಡಣೆ ಶಿಬಿರವನ್ನು ಆ. 20ರಂದು ಬೆಳಗ್ಗೆ 11 ಗಂಟೆಗೆ ಮೂರುಸಾವಿರ ಮಠದ ಸಭಾಗೃಹದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಶಿಬಿರದ ಸಂಚಾಲಕ ಮಂಜುನಾಥ ಭಟ್, ಈ ಶಿಬಿರದಲ್ಲಿ 246 ಫಲಾನುಭವಿಗಳಿಗೆ ಕೃತಕ ಕೈ, ಕಾಲು ಜೋಡಿಸಲಾಗುವುದು ಎಂದರು.
ಮಜೇಥಿಯಾ ಫೌಂಡೇಶನ್ನಿಂದ ಸತತ 12 ವರ್ಷಗಳಿಂದ ಅಂಗವಿಕಲರಿಗಾಗಿ ಹಲವಾರು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಶಿಬಿರದಲ್ಲಿ 246 ಜನರ ಕೈ , ಕಾಲುಗಳ ಅಳತೆ ತೆಗೆದುಕೊಂಡು, ಹೈದ್ರಾಬಾದ್ನ ಭಾರತ್ ವಿಕಾಸ ಪರಿಷತ್ ಟ್ರಸ್ಟ್ ವತಿಯಿಂದ ಸಿದ್ಧಪಡಿಸಿದ ಕೈ, ಕಾಲುಗಳನ್ನು ಜೋಡಿಸಲಾಗುತ್ತಿದೆ ಎಂದು ತಿಳಿಸಿದರು.
147 ಅಂಗವಿಕಲರಿಗೆ ಮೊಣಕಾಲು ಮೇಲಿನ ಹಾಗೂ ಕೆಳಗಿನ ಆರ್ಟಿಫಿಶಿಯಲ್ ಲಿಂಬ್, 73 ಜನರಿಗೆ ಕಾಸ್ಮೆಟಿಕ್ ಹ್ಯಾಂಡ್ಸ್, 17 ಜನರಿಗೆ ಕ್ಯಾಲಿಪರ್ಸ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಡಿಎಚ್ಒ ಡಾ. ಶಶಿ ಪಾಟೀಲ, ಕಿಮ್ಸ್ನ ಡಾ. ಸೂರ್ಯಕಾಂತ ಕಲ್ಲುರಾಯಾ, ಆಥೋಪೆಡಿಕ್ ಸರ್ಜನ್ ಡಾ. ಸಂದೀಪ ನೀರಲಗಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಡಾ. ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ, ಡಾ. ರಮೇಶ ಬಾಬು, ಅಮೃತ ಸುದ್ದಿಗೋಷ್ಠಿಯಲ್ಲಿ ಇದ್ದರು.