ಶಿವಮೊಗ್ಗ: ತಮ್ಮ ಪ್ರಭಾವ ಬೀರಿ ಪತ್ನಿಗೆ ಬೆಲೆ ಬಾಳುವ ನಿವೇಶನಗಳನ್ನು ಕೊಡಿಸಿದ ಸಿದ್ದರಾಮಯ್ಯ ಕೋಟ್ಯಂತರ ರೂ. ಲಾಭ ಮಾಡಿಕೊಂಡಿದ್ದಾರೆ. ಈಗ ತನಿಖೆ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಮತ್ತು ಮುಡಾ ಹಗರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೂ ಕಪ್ಪ ಸಲ್ಲಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದರು.
ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಹೆಸರಿನಲ್ಲಿ ಅರಿಶಿಣ-ಕುಂಕುಮ ರೂಪದಲ್ಲಿ 3.16 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ 1992ರಲ್ಲಿ ನಡೆದಿತ್ತು. ಇದಕ್ಕೆ ಪರಿಹಾರವಾಗಿ ಕೋಟ್ಯಂತರ ರೂ. ಮೌಲ್ಯದ ನಿವೇಶನವನ್ನು ಮುಡಾದಿಂದ ಪಾರ್ವತಮ್ಮ ಅವರಿಗೆ ನೀಡಲಾಗಿದೆ. ಎಲ್ಲವನ್ನೂ ನಿಯಮ ಮೀರಿ, ಸಿಎಂ ಪ್ರಭಾವಕ್ಕೆ ಒಳಗಾಗಿ ಕೊಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸುಪ್ರೀಂ ಕೋರ್ಟ್ ತೀರ್ಪಿನಂತೆ 2009ರ ನಂತರ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದರೆ ಮಾತ್ರ 50:50 ಪರಿಹಾರ ನೀಡಲು ಅವಕಾಶವಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಗೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಉಲ್ಲೇಖವಿದೆ. 2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಇದನ್ನು ಒಪ್ಪಿಕೊಂಡು ರಾಜಪತ್ರ ಹೊರಡಿಸಿದ್ದರು ಎಂದು ಹೇಳಿದರು.
ಸುಪ್ರೀಂ ತೀರ್ಪು, ಸರ್ಕಾರದ ನಿರ್ಣಯ ಬದಿಗೊತ್ತಿ 2020ರಲ್ಲಿ ಅಂದಿನ ಮುಡಾ ಆಯುಕ್ತರು ಪಾರ್ವತಮ್ಮ ಅವರಿಗೆ 50:50 ಅನುಪಾತದಲ್ಲಿ ನಿವೇಶನ ಮಂಜೂರು ಮಾಡಿದ್ದಾರೆ. 1980ರಲ್ಲಿ ಅಭಿವೃದ್ಧಿ ಪಡಿಸಿದ ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ನೀಡಲಾಗಿದೆ. ಇದರಲ್ಲಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ವಿವಿಧೆಡೆ ಬಡಾವಣೆಗಳ ನಿರ್ಮಾಣಕ್ಕೆ ಅನೇಕ ರೈತರ ಭೂಮಿ ಸ್ವಾಧೀನಕ್ಕೆ ಪಡೆಯಲಾಗಿದೆ. ಅವರಿಗೆ ನಿವೇಶನ ನೀಡಲು ಆಸಕ್ತಿ ತೋರದ ಸರ್ಕಾರ ಸಿಎಂ ಪತ್ನಿಗೆ ಮಾತ್ರ ನಿವೇಶನ ನೀಡಿದೆ. ಇದರ ಬಗ್ಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.