ಜಿಲ್ಲೆ

ಪೊಲೀಸರ ಬ್ಯಾಡ್ಜ್ ಕೀಳಲು ಯತ್ನಿಸಿದ ಕೈ ಕಾರ್ಯಕರ್ತ

ಹಾವೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕೈ ಕಾರ್ಯಕರ್ತರು ಪೊಲೀಸರೊಂದಿಗೆ ಉದ್ಧಟತನ ತೋರಿದ ಘಟನೆ ನಡೆಯಿತು.

ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಟಯರ್​ಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಟೈರ್​ಗೆ ಬೆಂಕಿ ಹಚ್ಚಬೇಡಿ ಎಂದು ಸೂಚಿಸಿದರು. ಇಷ್ಟಕ್ಕೆ ರೊಚ್ಚಿಗೆದ್ದ ಕೆಲ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕೆ ಮುಂದಾದರು. ಆಗ ವ್ಯಕ್ತಿಯೊಬ್ಬ ಪೊಲೀಸರ ಶರ್ಟ್​ಗೆ ಕೈ ಹಾಕಿ ಬ್ಯಾಡ್ಜ್ ಕೀಳಲು ಯತ್ನಿಸಿದ. ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಟಯರ್​ಗೆ ಬೆಂಕಿಯಿಟ್ಟು ಸಂಭ್ರಮಿಸಿದರು. ಮಾಜಿ ಸಚಿವ ಬಸವರಾಜ ಶಿವಣ್ಣನವರ ಹಾಗೂ ಸ್ಥಳಕ್ಕೆ ಆಗಮಿಸಿದ ಎಸ್​ಪಿ ಹನುಮಂತರಾಯ ಪರಿಸ್ಥಿತಿ ಗಮನಿಸಿ ಮೂವರನ್ನು ವಶಕ್ಕೆ ಪಡೆದು ವಾತಾವರಣ ತಿಳಿಗೊಳಿಸಿದರು. ಪ್ರತಿಭಟನೆ ನಂತರ ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಿದರು. ಕೈ ಕಾರ್ಯಕರ್ತರ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧವೂ ವ್ಯಕ್ತವಾಯಿತು.

ಸ್ಥಳೀಯ ಮೈಲಾರ ಮಹದೇವಪ್ಪ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜೆಪಿ ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿತು. ನಂತರ ಕೆಲಹೊತ್ತು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.