ಶ್ರೀದೇವಿ ಕುಂಬಾರ ಹಂಚಿನಾಳ 
ಜಿಲ್ಲೆ

ಹಂಚಿನಾಳದ ಶ್ರೀದೇವಿ ಸಾಧನೆ

ಪ್ರಶಾಂತ ಹೂಗಾರ

ಪ್ರಶಾಂತ ಹೂಗಾರ ಬೆಳಗಾವಿ
ಇಲ್ಲಗಳ ನೆಪ ಒಡ್ಡಿ ಕೈಕಟ್ಟಿ ಕುಳಿತುಕೊಳ್ಳುವ ಜನರ ಮಧ್ಯೆ ಶಿಕ್ಷಕರು ಇಲ್ಲದಿರುವ ಸಂದರ್ಭದಲ್ಲೂ ಯೂ-ಟ್ಯೂಬ್‌ನಲ್ಲಿ ಪಾಠ ಕೇಳಿ ವಿಷಯ ಮನನ ಮಾಡಿಕೊಳ್ಳುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿ 625ಕ್ಕೆ 590 ಅಂಕ ಪಡೆಯುವ ಮೂಲಕ ಸಾಧನೆ ಮಾಡಿ ಸೈ ಎನಿಸಿದ್ದಾರೆ.

ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಶ್ರೀ ಫಲಹಾರೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೀದೇವಿ ಕುಂಬಾರ ಸಾಧನೆ ಮಾಡಿದ ವಿದ್ಯಾರ್ಥಿನಿ. ಕೃಷಿ ಕುಟುಂಬದಲ್ಲಿ ಬೆಳೆದ ಈಕೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಎಲ್ಲ ವಿಷಯಗಳಲ್ಲಿ ಮುಂದಿದ್ದಾರೆ.

ಗ್ರಾಮೀಣ ಶಾಲೆಗಳಲ್ಲಿ ಸೌಕರ್ಯ ಕೊರತೆ, ಶಿಕ್ಷಕರ ಕೊರತೆ, ಪರಿಣಾಮಕಾರಿ ಬೋಧನೆ, ಪ್ರಯೋಗಾಲಯ ಇಲ್ಲದಿರುವಿಕೆ ಹೀಗೆ ಅನೇಕ ಸಮಸ್ಯೆಗಳನ್ನು ಮುಂದಿಟ್ಟು ಮೂಗು ಮುರಿಯುವ ಜನರು ಬಾಯಿ ಮೇಲೆ ಕೈ ಇಡುವಂತೆ ಸಾಧನೆ ಮಾಡಿರುವ ಶ್ರೀದೇವಿ ಸಾಧನೆಗೆ ಸಮಸ್ಯೆ ಅಡ್ಡಿಯಾಗದು ಎಂಬುದನ್ನು ನಿರೂಪಿಸಿದ್ದಾರೆ.

ಯೂ-ಟ್ಯೂಬ್ ಮೂಲಕ ವಿಜ್ಞಾನ ಕಲಿಕೆ
ಶಾಲೆಯಲ್ಲಿ ವಿಜ್ಞಾನ ಶಿಕ್ಷಕರ ಕೊರತೆಗೆ ತಲೆಕೆಡಿಸಿಕೊಳ್ಳದೆ ಶ್ರೀದೇವಿ ಡಿಜಿಟಲ್ ಯುಗದಲ್ಲಿ ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ದೊರೆಯುತ್ತದೆ ಎಂಬುದನ್ನು ಮನಗಂಡು ಯೂ-ಟ್ಯೂಬ್ ನೆರವು ಪಡೆದಿದ್ದಾಳೆ. ವಿಜ್ಞಾನ ವಿಷಯ ಶಿಕ್ಷಕರು ಇಲ್ಲದಿದ್ದರೂ ಪಾಠ ಹಾಗೂ ಪ್ರಾಯೋಗಿಕ ವಿಷಯಗಳನ್ನು ಯೂ-ಟ್ಯೂಬ್‌ನಲ್ಲಿ ನೋಡಿ ಕಲಿತಿದ್ದಾಳೆ. ಪ್ರಸ್ತುತ ದಿನಮಾನದಲ್ಲಿ ಸ್ಮಾರ್ಟ್‌ಫೋನ್ ಬಳಕೆಯಿಂದ ಕಾಲಹರಣ ಹಾಗೂ ದುರ್ಬಳಕೆ ಮಾಡಿಕೊಳ್ಳುವವರೇ ಹೆಚ್ಚು ಜನರಿರುವಾಗ
ಸ್ಮಾರ್ಟ್‌ಫೋನ್ ಸಹಾಯದಿಂದ ಎಲ್ಲರ ಹುಬ್ಬೇರುವಂತೆ ಸಾಧನೆ ಮಾಡಿದ್ದಾಳೆ.

ಎಸ್‌ಎಸ್‌ಎಲ್‌ಸಿ ಕಲಿಕೆ ವೇಳೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಒಳ್ಳೆಯ ಸಹಕಾರ ನೀಡಿದ್ದಾರೆ. ಶಿಕ್ಷಕರ ಪಾಠದ ಜತೆಗೆ ಯೂ-ಟ್ಯೂಬ್ ಸಹಾಯದಿಂದ ಕಠಿಣ ವಿಷಯಗಳನ್ನು ಮನೆಯಲ್ಲೇ ಅಧ್ಯಯನ ಮಾಡಿದ್ದೆ. 590 ಅಂಕ ಬಂದಿದ್ದು ಖುಷಿ ತಂದಿದೆ. ತಂದೆಯ ಕನಸಿನಂತೆ ಐಎಎಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ. ಶ್ರೀದೇವಿ ಕುಂಬಾರ ಹಂಚಿನಾಳ
ಶ್ರೀದೇವಿ ಕುಂಬಾರ ಹಂಚಿನಾಳ