ನರೇಗಲ್ಲ: ಕುಸ್ತಿ ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿದರೆ ಯಶಸ್ಸು ಸಾಧ್ಯ ಎಂದು ಶಾಖಾ ಶಿವಯೋಗ ಮಂದಿರದ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಶ್ರೀ ಮಾರುತೇಶ್ವರ ಹೊಂಡ ತುಳುಕಿಸುವ ಕಾರ್ಯಕ್ರಮ, ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವ ಹಾಗೂ ಮೂಕಪ್ಪಜ್ಜ ಸಂಕನೂರ ಅವರ 17ನೇ ಪುಣ್ಯಾರಾಧನೆ ನಿಮಿತ್ತ ಶ್ರೀ ಮಾರುತೇಶ್ವರ ವ್ಯಾಯಾಮ ಶಾಲೆಯ ಸಂಘಟಕರು ಎರಡು ದಿನ ಆಯೋಜಿಸಿದ್ದ ರಾಜ್ಯಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
‘ನಮ್ಮ ರಾಜ ಮಹಾರಾಜರು ಕುಸ್ತಿ ಪಂದ್ಯಾವಳಿ ಏರ್ಪಡಿಸಿ ಪೈಲ್ವಾನರನ್ನು ಕರೆಸಿ ಅವರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಾ ಆಟವನ್ನು ಆಡಿಸುತ್ತಿದ್ದರು. ಅದೇರೀತಿ ಮಾರುತೇಶ್ವರ ವ್ಯಾಯಾಮ ಶಾಲೆಯ ಸಂಘಟಕರು ಪ್ರತಿವರ್ಷ ಇಂತಹ ಕ್ರೀಡೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ. ಪ್ರತಿಯೊಬ್ಬರು ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎಂದರು.
ವಿಶೇಷ ಕುಸ್ತಿಯಲ್ಲಿ ಕಮತಗಿಯ ಹುಸೇನ ಪೈಲ್ವಾನ್ ಅವರನ್ನು ಚಿತ್ತ ಮಾಡುವ ಮೂಲಕ ಗಮನ ಸೆಳೆದ ಬೆಳಗಾವಿಯ ಹನಮಂತ ಪೈಲ್ವಾನ 3 ಕೆಜಿ ಬೆಳ್ಳಿಗದೆ, ನಗದು ಹಣ ಪಡೆದರು. ಬೆಳಗಾವಿ, ದಾವಣಗೇರಿ, ಗದಗ, ಧಾರವಾಡ, ಬಾಗಲಕೋಟೆ, ತಡಸಿನಕೊಪ್ಪ, ಲಕ್ಕುಂಡಿ, ಕರಡಿಕೊಪ್ಪ, ಹುಯಿಲಗೋಳ, ಕಡಪಟ್ಟಿ, ರೋಣ, ಅಬ್ಬಿಗೇರಿ ಸೇರಿದಂತೆ ರಾಜ್ಯದ ವಿವಿಧ ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ಜಗಜಟ್ಟಿಗಳು ಅಖಾಡದಲ್ಲಿ ತಮ್ಮ ಶಕ್ತಿಪ್ರದರ್ಶನ ಮಾಡಿದರು. ಮೈನವಿರೇಳಿಸಿದ ಪೈಲ್ವಾನರ ಕಾಳಗಕ್ಕೆ ನೂರಾರು ಸಂಖ್ಯೆಯ ಕ್ರೀಡಾ ಪ್ರೇಮಿಗಳು ಸಾಕ್ಷಿಯಾದರು.
ಪ್ರಥಮ ನಂಬರಿನ ಬೆಳಗಾವಿಯ ಪವನ್ ಅವರೊಂದಿಗೆ ತೀವ್ರ ಸೆಣಸಾಟ ನಡೆಸಿದ ಪೈಲ್ವಾನ್ ತಡಸಿನಕೊಪ್ಪದ ನಾಗರಾಜ ಅವರು ಎದುರಾಳಿಯನ್ನು ಚಾಕಚಕ್ಯತೆಯಿಂದ ಕೆಡವಿ 5 ಸಾವಿರ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡರು.
ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಕ್ರೀಡಾಪಟುಗಳಾದ ತಡಸಿನಕೊಪ್ಪದ ಶಶಾಂಕ ಜೊತೆ ಪುಡಕಲಕಟ್ಟಿಯ ಸಿದ್ದಾರೂಢ, ಕರಡಿಕೊಪ್ಪದ ಪ್ರಥಮ ಜೊತೆ ಬಡಕುದರಿಯ ಪ್ರವೀಣ ಸಮಜೋಡಿ ಆಟ ಪ್ರದರ್ಶಿಸಿ ನಗದು ಬಹುಮಾನ ಪಡೆದರು.
ಗ್ರಾಮದ ಪೈಲ್ವಾನ್ ಬಸವರಾಜ ಹಡಪದ ಶೀಲ್ಡ್ ನಗದು ಬಹುಮಾನ ಪಡೆದರು. ಶಿವನಾಗಪ್ಪ ದೊಡ್ಡಮೇಟಿ, ಅಶೋಕಪ್ಪ ಕಡಗದ, ಕಿರಣ ಮುಗಳಿ, ಎಂ.ಎಸ್. ಕೋರಿ, ಶೇಖರಪ್ಪ ಆದಿ, ಬಸವರಾಜ ಶ್ಯಾಶೆಟ್ಟಿ, ಅಂದಪ್ಪ ಸಂಕನೂರ, ಮುತ್ತಣ್ಣ ಅಕ್ಕಿಶೆಟ್ಟರ, ಬಸವರಾಜ ಆದಿ, ಶಿವರಾಜ ಮುಗಳಿ, ಬಸಪ್ಪ ಕೊಪ್ಪದ ಇತರರು ಇದ್ದರು. ಶಲವಡಿಯ ದೇವಪ್ಪ, ಕನ್ಯಾಳದ ದೇವಪ್ಪ, ಹೇಮಣ್ಣ, ಕುರ್ತುಕೋಟಿಯ ನಿವೃತ್ತ ಇಎಸ್‌ಐ ರಾಮಣ್ಣ ಹಲಗಿ, ಅಬ್ಬಿಗೇರಿಯ ರಾಯಪ್ಪ, ಗಾಂಧೆಪ್ಪ ಕುರಿ, ಧರ್ಮಣ್ಣ ಆರೇರ್, ಯಲ್ಲಪ್ಪ ಮಡಿವಾಳರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಲಕ್ಷ್ಮೇಶ್ವರದ ದೇವಪ್ಪ ಗಡೇದ, ಹೊಂಬಳದ ಹುಸೇನಸಾಬ, ಪ್ರಕಾಶಪ್ಪ ಹೊಸಮನಿ ವೀಕ್ಷಕ ವಿವರಣೆ ನೀಡಿದರು. ಸಂಜೆ 5ಗಂಟೆಗೆ ಆರಂಭವಾದ ಪಂದ್ಯಾವಳಿ ರಾತ್ರಿ 8ಗಂಟೆಯವರೆಗೆ ನಡೆಯಿತು.