ಆನೇಕಲ್: ಸೇವೆಗಾಗಿ ತನು ಮನ ಸಮರ್ಪಿಸಿಕೊಂಡು ಸಮಾಜದಿಂದ ಉತ್ತಮ ವೈದ್ಯ ಎಂಬ ಹೆಸರು ಸಂಪಾದಿಸುವುದರಿಂದ ವೈದ್ಯಕೀಯ ಪದವಿ ಗೌರವ ಹೆಚ್ಚುತ್ತದೆ ಎಂದು ಬೆಂಗಳೂರು ರಾಜೀವ್ ಗಾಂಧಿ ಯುನಿವರ್ಸಿಟಿ ಹೆಲ್ತ್ ಸೈನ್ಸ್‌ನ ಉಪ ಕುಲಪತಿ ಡಾ.ಎಸ್.ಸಚ್ಚಿದಾನಂದ ಅಭಿಪ್ರಾಯಪಟ್ಟರು.
ಅತ್ತಿಬೆಲೆಯ ಆಕ್ಸ್‌ಪರ್ಡ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ 2020ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ವಿಜ್ಞಾನ, ಕಲೆ, ವಾಣಿಜ್ಯ ಇಂಜಿನಿಯರಿಂಗ್ ಹಾಗೂ ಇತರೆ ಶಿಕ್ಷಣ ಕ್ಷೇತ್ರಗಳಿಗಿಂತ ವೈದ್ಯಕೀಯ ಶಿಕ್ಷಣ ಕ್ಷೇತ್ರ ವಿಶಿಷ್ಟ ಮತ್ತು ಮಹತ್ವದ ಕ್ಷೇತ್ರವಾಗಿದೆ. ವೈದ್ಯಕೀಯ ಪದವಿ ಪಡೆದ ನಂತರ ವೃತ್ತಿ ಬದುಕಿನಲ್ಲಿ ರೋಗಿಗಳೊಂದಿಗೆ ಹೊಸ ಹೊಸ ಕಲಿಕೆ ಮತ್ತು ಅನುಭವ ಪಡೆಯಬಹುದಾಗಿದೆ. ವೈದ್ಯಕೀಯ ಸೇವೆಯಲ್ಲಿ ಆತ್ಮ ಸಂತೃಪ್ತಿ ಹಾಗೂ ಜೀವನ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ ಎಂದರು.
ವೈದ್ಯರಾದವರು ವಿಶ್ವಾಸದಿಂದ ರೋಗಿಯ ಮನಸ್ಸು ಗೆಲ್ಲಬೇಕು. ರೋಗಿಗೆ ವೈದ್ಯರ ಮೇಲೆ ವಿಶ್ವಾಸ ಮೂಡಬೇಕು. ಆಗ ಚಿಕಿತ್ಸೆಯ ಫಲ ಸಾರ್ಥಕವಾಗಿ ಉತ್ತಮ ಸಮಾಜದೊಳಗೆ ವೈದ್ಯರ ನಡುವೆ ಉತ್ತಮ ಭಾಂಧವ್ಯ ಉಂಟಾಗುತ್ತದೆ ಎಂದು ತಿಳಿಸಿದರು.
ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಇಂದಿನ ದಿನಗಳಲ್ಲಿ ಕಾಯಿಲೆಗಳಿಗೆ ಒಳಗಾಗುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಲ್ಲಿ 25-40 ವರ್ಷದ ಯುವಕರು ಕಂಡುಬರುತ್ತಿರುವುದು ಆತಂಕ ಉಂಟುಮಾಡುತ್ತಿದೆ, ಇಂತಹ ಸಂದರ್ಭದಲ್ಲಿ ದೊಡ್ಡ ಡೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಬಡವರು ಮತ್ತು ಮದ್ಯಮವರ್ಗದವರಿಗೆ ವೈದ್ಯಕೀಯ ಸೇವೆ ದೊರಕುವುದು ಬಹಳ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದ ಬಡವರು ಮತ್ತು ಮದ್ಯಮ ವರ್ಗದವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲು ಇಂತಹ ವೈದ್ಯಕೀಯ ಕಾಲೇಜುಗಳಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಆಕ್ಸ್‌ಪರ್ಡ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಡಾ. ಎಸ್.ಎನ್.ವಿ.ಎಲ್. ನರಸಿಂಹರಾಜು ಮಾತನಾಡಿ, ಆರೋಗ್ಯಕರ ಸಮಾಜ ಹಾಗೂ ಸದೃಢ ಭಾರತ ನಿರ್ಮಾಣ ಮಾಡಲು ಯುವ ಪದವೀಧರರ ಕೊಡುಗೆ ಮುಖ್ಯ. ಇಂದಿನ ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳನ್ನು ಕಾಲಕ್ಕೆ ತಕ್ಕಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಯನ್ನು ಕೊಡುವ ಕಾರ್ಯವನ್ನು ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ತಿಳಿಸಿದರು.
2020 ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ವೈದ್ಯಕೀಯ ಪದವಿ ಪಡೆದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೈದ್ಯಕೀಯ ಕಾಲೇಜಿನ ಸೂಪರಿಂಟೆಂಡೆಂಟ್ ಡಾ.ಜಿ.ಮೋಹನ್, ಕಾಲೇಜಿನ ನಿರ್ದೆಶಕರಾದ ವೈ.ಶ್ರೀನಿವಾಸಲು, ಪ್ರಾಂಶುಪಾಲ ಎಂ.ಬಿ.ಸನಿಕೊಪ್ಪ, ಸಂಯೋಜಕ ಶಿವಬಸವಯ್ಯ ಹಾಗೂ ವ್ಯವಸ್ಥಾಪಕ ಡಾ.ಗಿರೀಶ್ ಹಾಜರಿದ್ದರು.