ಹನಗೋಡು : ವಿದ್ಯಾರ್ಥಿಗಳು ಸಮಯ ಪರಿಪಾಲನೆ, ಸನ್ನಡತೆ ಹಾಗೂ ಶ್ರದ್ಧಾಪೂರ್ವಕವಾಗಿಕಾರ್ಯಗಳನ್ನು ಮಾಡುವ ಅಭ್ಯಾಸ ರೂಢಿಸಿಕೊಂಡರೆ ಮಾನಸಿಕ ಒತ್ತಡದಿಂದ ಮುಕ್ತರಾಗಿ ಸಾಧನೆ ಮಾಡಬಹುದು ಎಂದು ಮನೋವೈದ್ಯ ಡಾ. ಅರುಣ್ ತಿಳಿಸಿದರು. ಹನಗೋಡು ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಪರೀಕ್ಷೆ ಭಯ ಮತ್ತು ಒತ್ತಡ ನಿವಾರಣೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಒಂಟಿತನ, ಕಾರಣವಿಲ್ಲದೇ ಅಳುವುದು, ನಗುವುದು ಇತ್ಯಾದಿ ಅಸಹಜ ನಡವಳಿಕೆ ಇದ್ದರೆ ಅವು ಮಾನಸಿಕ ಖಿನ್ನತೆಗೆ ಮೂಲವಾಗುತ್ತವೆ. ಇವುಗಳನ್ನು ಹೋಗಲಾಡಿಸಲು ಶಿಸ್ತು, ಸಮಯ ಪರಿಪಾಲನೆ, ಸನ್ನಡತೆ ಹಾಗೂ ಯಾವುದೇ ಕೆಲಸ ಮಾಡುವ ಮುನ್ನ ಪೂರ್ವಸಿದ್ಧತೆ- ಮುಂತಾದ ಅಭ್ಯಾಸಗಳನ್ನು ನಿತ್ಯ ರೂಢಿ ಮಾಡಿಕೊಳ್ಳಬೇಕು. ಹಾಗಾದಾಗ ಮಾತ್ರ ಮಾನಸಿಕ, ದೈಹಿಕ, ಸಾಮಾಜಿಕ, ಭಾವನಾತ್ಮಕ ಆರೋಗ್ಯ ನಮ್ಮದಾಗುತ್ತದೆ ಎಂದು ಅವರು ವಿವರಿಸಿದರು. ವಿವಿಧ ಪ್ರಾತ್ಯಕ್ಷಿಕೆ ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಬೋಧಿಸಿದ್ದು ವಿಶೇಷವಾಗಿತ್ತು. ಉಪ ಪ್ರಾಚಾರ್ಯ ಕೆ. ಸಂತೋಷ್ ಕುಮಾರ್ ಮಾತನಾಡಿ, ಪ್ರೌಢಶಾಲಾ ಹಂತದ ವಯಸ್ಸು ಬೆಳವಣಿಗೆಯ ಬುಗ್ಗೆಯಾಗಿರುತ್ತದೆ. ಈ ಹಂತದಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ವ್ಯತ್ಯಾಸ ವಾಗುವುದು ಸಹಜ. ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುವುದು, ಭಯಕ್ಕೆ ತುತ್ತಾಗುವುದು ವಯಸ್ಸಿನ ಪ್ರಕ್ರಿಯೆಯಾಗಿರುತ್ತದೆ. ಇದರಿಂದ ಯಾರೂ ಗಾಬರಿ ಪಡುವ ಅಗತ್ಯ ಇಲ್ಲ ಎಂದರು.