ಹನಗೋಡು: ಗ್ರಾಮದ ಸ್ವಚ್ಛತೆ ಕಾಪಾಡುವಲ್ಲಿ ಗ್ರಾ.ಪಂ. ಆಡಳಿತ ಮಂಡಳಿ ವಿಫಲವಾಗಿದೆ, ಘನತ್ಯಾಜ್ಯ ನಿರ್ವಹಣೆ ಸರಿಯಿಲ್ಲ, ತೆರಿಗೆ ವಸೂಲಿ ಮಾಡುತ್ತಿಲ್ಲ, ಇ-ಸ್ವತ್ತು ಸೇರಿದಂತೆ ಇತರ ದಾಖಲೆಗಳನ್ನು ನೀಡುತ್ತಿಲ್ಲ, ಗ್ರಾ.ಪಂ.ವತಿಯಿಂದ ಕೈಗೊಂಡಿರುವ ಕಾಮಗಾರಿ ನಿರ್ವಹಿಸುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ...
ಇದು ಹನಗೋಡು ಗ್ರಾ.ಪಂ ಆಡಳಿತ ವೈಖರಿ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ತೀವ್ರ ತರಾಟೆ ಕೈಗೊಂಡರು. ಹನಗೋಡು ಗ್ರಾ.ಪಂ. ಆವರಣದಲ್ಲಿ ಸೋಮವಾರ ನಡೆದ ನರೇಗಾ ಹಾಗೂ 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಲೆಕ್ಕ ಪರಿಶೋಧನೆಯ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿ ಬಂದ ದೂರುಗಳು.
ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಸ್ವಚ್ಛತಾ ಕಾರ್ಯಕ್ಕೆ ವಿಪರೀತ ಹಣ ಖರ್ಚು ಮಾಡಲಾಗಿದೆ. ಘನತ್ಯಾಜ್ಯ ನಿರ್ವಹಣಾ ಘಟಕ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಗ್ರಾ.ಪಂ. ಕಚೇರಿಯ ಸುಣ್ಣ-ಬಣ್ಣ ಹಾಗೂ ಕಂಪಾರ್ಟ್‌ಮೆಂಟ್ ಅಳವಡಿಕೆಯಲ್ಲಿ ಸಾಕಷ್ಟು ಹಣ ವ್ಯಯವಾಗಿದೆ. ಸ್ಮಶಾನ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸವಿತ ಸಮಾಜದ ಅಧ್ಯಕ್ಷ ಗೋವಿಂದರಾಜು, ಗ್ರಾ.ಪಂ. ಮಾಜಿ ಸದಸ್ಯೆ ಮಹಾಲಕ್ಷ್ಮೀ ಇತರರು ದೂರಿದರು.
ಕಾಮಗಾರಿಗಳ ತನಿಖೆಯಾಗಲಿ: ಆಸ್ಪತ್ರೆ ಮುಂಭಾಗ, ಜನತಾ ಬಡಾವಣೆ ಮತ್ತಿತರ ಕಡೆ ಸ್ವಚ್ಛವಾಗದೆ ದುರ್ವಾಸನೆ ಬೀರುತ್ತಿದೆ. ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದರೂ ಕ್ರಮವಹಿಸುತ್ತಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವಂತೆ ಮುಖಂಡ ನಂಜಪ್ಪ, ಸೋಮು, ಮಹೇಂದ್ರ ಮತ್ತಿತರರು ಒತ್ತಾಯಿಸಿದರು.
ಸಭೆಗೆ ಬಹುತೇಕ ಸದಸ್ಯರು ಗೈರು ಹಾಜರಿ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಸ್ವಚ್ಛತಾ ಕಾರ್ಯ, ಸ್ಮಶಾನ ರಸ್ತೆ ಕಾಮಗಾರಿ ಹಾಗೂ ಆಡಳಿತದ ಬಗ್ಗೆ ಅಧ್ಯಕ್ಷ ಚೆನ್ನಯ್ಯ, ಪಿಡಿಒ ಅನಿತಾ ಸ್ಪಷ್ಟನೆ ನೀಡಿದರೂ ಕೇಳದ ಮುಖಂಡರು ತನಿಖೆ ನಡೆಯಬೇಕು ಹಾಗೂ ಇನ್ನಾದರೂ ಗ್ರಾಮ ಪಂಚಾಯಿತಿ ಜನರ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ವೇಳೆ ತಾಲೂಕು ವ್ಯವಸ್ಥಾಪಕ ಮಂಜುನಾಥ್ ಕಾಮಗಾರಿಗಳ ತನಿಖೆಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಅಂಗನವಾಡಿ, ಗ್ರಂಥಾಲಯ ಕಟ್ಟಡ ಆಗಲಿ: ಗ್ರಾಮದ ಕೋಟೆಬೀದಿಯ ಅಂಗನವಾಡಿ ಕಟ್ಟಡ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಪಂಚಾಯಿತಿಯ ಅನುದಾನದಡಿ ಪೂರ್ಣಗೊಳಿಸುವಂತೆ ಹಾಗೂ ಹೋಬಳಿ ಕೇಂದ್ರವಾದರೂ ಸುಸಜ್ಜಿತ ಗ್ರಂಥಾಲಯ ಕಟ್ಟಡವಿಲ್ಲದ ಬಗ್ಗೆ ಮುಖಂಡ ಸುರೇಶ್, ಮರಿಯಯ್ಯ, ಕಿರಂಗೂರುಸ್ವಾಮಿ ಸೋಮು, ಪರಶಿವ, ಮಹೇಂದ್ರ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದಾಗ ಈಗಾಗಲೇ ಗ್ರಂಥಾಲಯ ನಿರ್ಮಾಣಕ್ಕೆ ಸೊಸೈಟಿ ಹಿಂಭಾಗದ ಸ್ಥಳವನ್ನು ಗುರುತಿಸಲಾಗಿದ್ದು, ಅನುದಾನಕ್ಕೆ ಜಿಲ್ಲಾ ಪಂಚಾಯಿತಿಗೆ ಕೋರಲಾಗಿದೆ ಎಂದು ಪಿಡಿಒ ಅನಿತಾ ತಿಳಿಸಿದರು. ಅಂಗನವಾಡಿ ಕಟ್ಟಡ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವುದಾಗಿ ಅಧ್ಯಕ್ಷ ಚೆನ್ನಯ್ಯ ತಿಳಿಸಿದರು.
ಹರಿಜನ ಬಡಾವಣೆಯ ಚರಂಡಿ ನೀರು ಪಕ್ಕದ ಹೊಲಕ್ಕೆ ನುಗ್ಗುತ್ತಿರುವ ಬಗ್ಗೆ ಕೇಳಿ ಬಂದ ಆಕ್ಷೇಪಣೆಗೆ ಬೂದುನೀರು ನಿರ್ವಹಣೆಗೆ ಅನುದಾನ ಬಂದಿದ್ದು, ಇಂಜಿನಿಯರ್ ತಾಂತ್ರಿಕ ಸಲಹೆ ಪಡೆದು ಅಗತ್ಯ ಕ್ರಮವಹಿಸಲಾಗುವುದೆಂದು ಪಿಡಿಒ ಭರವಸೆ ನೀಡಿದರು. ಕಾಮಗೌಡನಹಳ್ಳಿಯಲ್ಲಿ ಚರಂಡಿ ನಿರ್ವಹಣೆ ಸರಿಯಾಗಿಲ್ಲವೆಂದು ಸಣ್ಣ ನಿಂಗಪ್ಪ ದೂರಿಗೆ ಇದರ ನಿರ್ವಹಣೆಗೆ ಸಾಕಷ್ಟು ಅನುದಾನ ಸಾಲುತ್ತಿಲ್ಲವೆಂದು ಸದಸ್ಯ ಬೋರೇಗೌಡ ಸ್ಪಷ್ಟಪಡಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ರವಿ ಹಾಗೂ ಕೃಷಿ ಇಲಾಖೆ ಅಧಿಕಾರಿ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಿಬ್ಬಂದಿ ಚಂದ್ರಶೇಖರ್, ಆನಂದ್ ಮತ್ತಿತರಿದ್ದರು.