ಜಿಲ್ಲೆ

ಹಾನಗಲ್ಲ ಪುರಸಭೆ ಮಳಿಗೆ ಬಾಡಿಗೆ 2 ಕೋಟಿ ರೂ. ಬಾಕಿ

ಹಾನಗಲ್ಲ: ಪುರಸಭೆ ಮಳಿಗೆಗಳ ಬಾಡಿಗೆ ನಿರ್ದಿಷ್ಟ ನಿಯಮದಂತೆ ವಸೂಲಿಯಾಗುತ್ತಿಲ್ಲ. 2 ಕೋಟಿ ರೂ. ಬಾಕಿ ಇದೆ ಎಂದು ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮುಖ್ಯಾಧಿಕಾರಿಗೆ ಪ್ರಶ್ನಿಸಿದರು.

ಜಮೀರಅಹಮ್ಮದ್ ಶೇಖ್, ಮಳಿಗೆಗಳ ಬಾಡಿಗೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಬಾಡಿಗೆ ವಸೂಲಿ ಮಾಡುತ್ತೇವೆ, ನಿಯಮಗಳನ್ನು ಜಾರಿ ಮಾಡುತ್ತೇವೆ, ಇದರಲ್ಲಿ ಸಂಶಯ ಬೇಡ ಎಂದು ಮುಖ್ಯಾಧಿಕಾರಿ ವೈ.ಕೆ. ಜಗದೀಶ ಉತ್ತರಿಸಿದರು. ಆದರೆ, 2 ಕೋಟಿ ರೂ. ಬಾಕಿ ಉಳಿದರೂ ಕೂಡ ಈವರೆಗೆ ವಸೂಲಿ ಆಗದ ಬಗ್ಗೆ ಉತ್ತರಿಸಲೇ ಇಲ್ಲ. ಇದರೊಂದಿಗೆ ಠರಾವು ಮಂಡಿಸಿದಾಗ ಸೂಚಕರು ಹಾಗೂ ಅನುಮೋದಕರ ಹೆಸರು ದಾಖಲಿಸುವಲ್ಲಿ ಹಲವು ಗೊಂದಲಗಳಾಗಿವೆ. ಇದು ಸೂಚಿಸಿದವರಿಗೂ ಅನುಮೋದಿಸಿದವರಿಗೂ ಗೊತ್ತಿರುವುದೇ ಇಲ್ಲ ಎಂದು ಜಮೀರ ಶೇಖ್ ಗಮನ ಸೆಳೆದರು.

ಕಮಾಟಗೇರಿ 12ನೇ ವಾರ್ಡಿನ ರಸ್ತೆ ಕಾಮಗಾರಿಗಾಗಿ ವರ್ಷಕ್ಕೂ ಮೊದಲೇ ಟೆಂಡರ್ ಆಗಿದೆ. ಆದರೆ, ಈವರೆಗೂ ಕೆಲಸವೇ ಆಗಿಲ್ಲ. ಮಾರ್ಚ್​ನಲ್ಲಿ ಇಲ್ಲಿನ ಗ್ರಾಮದೇವಿ ಜಾತ್ರೆ ನಡೆಯಲಿದೆ. ಅಷ್ಟರೊಳಗೆ ರಸ್ತೆ ಕಾಮಗಾರಿ ಆಗದಿದ್ದರೆ ಸಾರ್ವಜನಿಕರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಶೋಭಾ ಉಗ್ರಣ್ಣನವರ ಎಚ್ಚರಿಕೆ ನೀಡಿದರು. ಗುತ್ತಿಗೆದಾರರು ಪತ್ತೆ ಇಲ್ಲ. ಕೆಲಸ ಮಾಡುತ್ತಿಲ್ಲ. ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.

ಪಟ್ಟಣದ ಪ್ರಾಥಮಿಕ ಶಾಲಾ ಕಟ್ಟಡಗಳಲ್ಲಿದ್ದ 10 ಅಂಗನವಾಡಿಗಳು ದುರಸ್ತಿ ಆಗಬೇಕಾಗಿದೆ. ಆದರೆ, ದುರಸ್ತಿಗೆ ನಮ್ಮಲ್ಲಿ ಹಣವಿಲ್ಲ ಎಂದು ಸಿಡಿಪಿಒ ನಂದಕುಮಾರ ತಿಳಿಸಿದರು.

ಮಾಜಿ ಅಧ್ಯಕ್ಷೆ ಹಸೀನಾಬಿ ನಾಯ್ಕನವರ ಪುರಸಭೆ ಕಾರ್ಯವೈಖರಿಗೆ ಪ್ರತಿಕ್ರಿಯಿಸಿ, ಪುರಸಭೆಯಲ್ಲಿ ಅನುದಾನವಿಲ್ಲ. ನಗರದ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಸಮರ್ಪಕ ಪೂರೈಕೆ ಇಲ್ಲ. ಹಂದಿಗಳ ಕಾಟ ಹೆಚ್ಚಾಗಿದೆ. ನಾವು ಸಭೆ ಮಾಡಿ ಹೋಗುವುದಷ್ಟೇ ಆಗಿದೆ. ಏನೂ ಕೆಲಸಗಳಾಗುತ್ತಿಲ್ಲ. ಸಭೆಯಲ್ಲಿ ಮಹಿಳಾ ಸದಸ್ಯರಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲೂ ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ ವೇದಿಕೆಯಲ್ಲಿದ್ದರು. ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಖುರ್ಷಿದ್​ಅಹ್ಮದ್ ಹುಲ್ಲತ್ತಿ, ಎಸ್.ಕೆ. ಪೀರಜಾದೆ, ಸದಸ್ಯರಾದ ಪರಶುರಾಮ ಖಂಡೂನವರ, ವಿರುಪಾಕ್ಷಪ್ಪ ಕಡಬಗೇರಿ, ಸುನಕವ್ವ ಚಿಕ್ಕಣ್ಣನವರ, ಶೋಭಾ ಉಗ್ರಣ್ಣನವರ ಇತರರಿದ್ದರು.