ಹಾನಗಲ್ಲ: ಹಾನಗಲ್ಲ ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ತವರು ಮನೆಯಾಗಿದೆ. ಕಳೆದ 87 ವರ್ಷಗಳಿಂದ ಆಚರಿಸುತ್ತಿರುವ ನಾಡಹಬ್ಬದಿಂದ ತಾಲೂಕಿನ ಹಿರಿಮೆ ಹೆಚ್ಚಿಸಿದೆ. ಇಂಥ ನೆಲದಲ್ಲಿ ಪಾರಂಪರಿಕ ಸಂಪ್ರದಾಯ ಅಳಿಸಿ ಹೋಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಕಾಳಜಿ ವಹಿಸೋಣ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ಫ್ರೆಂಡ್ಸ್ ಅಸೋಸಿಯೇಶನ್ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಹಬ್ಬ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಇಂದಿನ ಹಾನಗಲ್ಲ ಅಂದು ಕದಂಬರು ಆಳಿದ ಪಾನಂಗಲ್ ಆಗಿತ್ತು. ಎಲ್ಲ ದೃಷ್ಟಿಗಳಿಂದಲೂ ಸುಭಿಕ್ಷವಾಗಿದ್ದ ಪ್ರಾಂತವಾಗಿತ್ತು. ಜನಜಾಗೃತಿಗಾಗಿ ಆರಂಭಗೊಂಡ ಈ ನಾಡಹಬ್ಬ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸೃಜನಶೀಲ ಮನೋಭಾವನೆಯ ಸಾಹಿತ್ಯಾಸಕ್ತರು ಆರಂಭಿಸಿದ್ದ ನಾಡಹಬ್ಬ, ಇತ್ತೀಚಿನ ಕೆಲ ವರ್ಷಗಳಲ್ಲಿ ಕರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದ ಕಳೆಗುಂದಿದೆ. ಅಂದು ಸಾಹಿತ್ಯ, ಸಂಗೀತಕಲೆ, ಜನಜಾಗೃತಿ ಹಾಗೂ ಸಾಂಸ್ಕೃತಿಕ ವಾತಾವರಣ ನಿಮಾಣಕ್ಕೆ ಆರಂಭಗೊಂಡ ನಾಡಹಬ್ಬಕ್ಕೆ ಮತ್ತೆ ಜೀವ ಕಳೆ ತುಂಬುವ ಅಗತ್ಯವಿದೆ. ನಾಡದೇವಿ ನಮ್ಮೆಲ್ಲರ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸಿದರು.
ಸಾಹಿತಿ ಉದಯ ನಾಸಿಕ ಮಾತನಾಡಿ, ಹಾನಗಲ್ಲ ಜನತೆ ನಾಡಹಬ್ಬವನ್ನು ಮನೆ, ಮನೆಗಳ ಹಬ್ಬವಾಗಿ ಆಚರಿಸುವ ಪರಿಪಾಠ ಹೊಂದಿದ್ದಾರೆ. ನಾಡಹಬ್ಬದ ಮೂಲಕ ನಾಡು, ನುಡಿ ಸೇವೆಯನ್ನು ಶ್ರದ್ಧೆಭಕ್ತಿಯಿಂದ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದ ದಿಗ್ಗಜರು, ಚಿತ್ರನಟರು, ಹಿರಿಯ ಕಲಾವಿದರು ಸಾಕ್ಷಿಯಾಗಿರುವ ಹಾನಗಲ್ಲ ನಾಡಹಬ್ಬ ಕಲೆ, ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿದೆ. ಇಂಥ ಹಿನ್ನೆಲೆಯ ಹಾನಗಲ್ಲ ನಾಡಹಬ್ಬದ ಗತವೈಭವ ಮತ್ತೆ ಮರುಕಳಿಸಬೇಕಿದೆ ಎಂದರು.
ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಸದಸ್ಯರಾದ ವಿರೂಪಾಕ್ಷಪ್ಪ ಕಡಬಗೇರಿ, ಪರಶುರಾಮ ಖಂಡೂನವರ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಕೆ.ಎಲ್. ದೇಶಪಾಂಡೆ, ನಿವೃತ್ತ ಉಪನ್ಯಾಸಕ ಆರ್.ಸಿ. ದೇಸಾಯಿ, ಗಿರೀಶ ದೇಶಪಾಂಡೆ, ಸುಧಾಬಾಯಿ ದೇಶಪಾಂಡೆ, ಅಶೋಕ ಆರೇಗೊಪ್ಪ, ಸಂಜು ಬೇದ್ರೆ, ಸುರೇಖಾ ಕುಲಕರ್ಣಿ, ಡಿ.ಜಿ. ಕುಲಕರ್ಣಿ, ವಿದ್ಯಾಶಂಕರ ದೇಶಪಾಂಡೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.