ಹಾನಗಲ್ಲ: ರಾಜ್ಯದಲ್ಲಿರುವ ಬಡ ಕುಟುಂಬಗಳನ್ನು ಶೈಕ್ಷಣಿಕ, ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಲಾಗಿದೆ. ಶ್ರೀಕ್ಷೇತ್ರಕ್ಕೆ ಸಮಾಜದಿಂದ ಬಂದ ದುಡ್ಡನ್ನು ಸಮಾಜಕ್ಕೇ ವಿನಿಯೋಗಿಸಲಾಗುತ್ತಿದೆ ಎಂದು ಧ.ಗ್ರಾ.ಯೋ. ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಹೇಳಿದರು.
ಪಟ್ಟಣದ ಕುಮಾರೇಶ್ವರ ಮಠದ ಸದಾಶಿವ ಮಂಗಲ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಧ.ಗ್ರಾ.ಯೋ. ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
40 ವರ್ಷಗಳಿಂದ ಪುರುಷ ಹಾಗೂ ಮಹಿಳಾ ಒಕ್ಕೂಟ ರಚಿಸಿ, ಆರ್ಥಿಕತೆ ವೃದ್ಧಿಸುವ ಯೋಜನೆಗಳಲ್ಲಿ ಅವರನ್ನು ತೊಡಗಿಸಲಾಗುತ್ತಿದೆ. ಶ್ರೀಕ್ಷೇತ್ರದಿಂದ ಆರೋಗ್ಯ, ಶಿಕ್ಷಣ, ನೈರ್ಮಲ್ಯ ಕ್ಷೇತ್ರದಲ್ಲಿ ಕೂಡ ಸೇವೆ ನೀಡಲಾಗುತ್ತಿದೆ. ಕೃಷಿಗೂ ಒತ್ತು ನೀಡಲಾಗಿದ್ದು, ಸಾವಿರಾರು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ದೇವಸ್ಥಾನ ಜೀಣೋದ್ಧಾರ, ವೃದ್ಧರಿಗೆ ಮಾಸಾಶನ, ಸದಸ್ಯರ ಮಕ್ಕಳಿಗೆ ಶಿಷ್ಯವೇತನ, ಹೀಗೆ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಧ.ಗ್ರಾ.ಯೋಜನೆಯಡಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಆರ್ಥಿಕ ಸಬಲೀಕರಣ ಉದ್ದೇಶ ಹೊಂದಿರುವ ಧ.ಗ್ರಾ ಯೋಜನೆಯಡಿ ತಾಲೂಕಿನ 30,000ಕ್ಕೂ ಅಧಿಕ ಸದಸ್ಯರಿಗೆ ಉದ್ಯೋಗ ಮತ್ತಿತರ ಉದ್ದೇಶಗಳಿಗಾಗಿ ಸಾಲ ನೀಡಲಾಗಿದೆ ಎಂದರು.
ಧ.ಗ್ರಾ. ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘಗಳು ಶಿಸ್ತುಬದ್ಧವಾಗಿ ಹಣಕಾಸು ಕಾರ್ಯ ನಿರ್ವಹಿಸುತ್ತಿವೆ. ಸಾಲದ ವ್ಯವಹಾರಗಳನ್ನು ಸದಸ್ಯರೇ ನಿರ್ವಹಿಸುತ್ತಿದ್ದಾರೆ. ಮಹಿಳಾ ಒಕ್ಕೂಟ ವ್ಯವಸ್ಥೆಯಲ್ಲಿ ವ್ಯವಹಾರಗಳೆಲ್ಲ ಪಾರದರ್ಶಕವಾಗಿ ನಿರ್ವಹಣೆಯಾಗುತ್ತಿವೆ ಎಂದರು.
ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ, ಐಡಿಬಿಐ ಬ್ಯಾಂಕ್ ಪ್ರಬಂಧಕ ಸೋಮಶೇಖರ, ವಾಸುದೇವಮೂರ್ತಿ ಮೂಡಿ, ನಾಗರಾಜ ಪಾವಲಿ, ನಾರಾಯಣಸ್ವಾಮಿ, ಐಡಿಬಿಐ ಬ್ಯಾಂಕ್ ಅಧಿಕಾರಿ ಅಮೃತೇಶ್ವರ, ಮಾರುತಿ ಶಿಡ್ಲಾಪುರ, ಇತರರು ಇದ್ದರು. ರಾಘವೇಂದ್ರ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.