ಜಿಲ್ಲೆ

ಹೆಚ್ಚುವರಿ ವೇತನ ಶಿಕ್ಷಣಕ್ಕೆ ದೇಣಿಗೆ ನೀಡಿದ ಶಾಸಕ ಮಾನೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಹಾನಗಲ್ಲ: ದುಪ್ಪಟ್ಟಾಗಿರುವ ಶಾಸಕರ ವೇತನವನ್ನು ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ವಿನಿಯೋಗಿಸುವುದಾಗಿ ಪ್ರಕಟಿಸಿದ್ದ ಶಾಸಕ ಶ್ರೀನಿವಾಸ ಮಾನೆ ಅವರು, ಮೊದಲ ತಿಂಗಳ ಹೆಚ್ಚುವರಿ ವೇತನ 50 ಸಾವಿರ ರೂ.ಗಳ ಚೆಕ್​ನ್ನು ಪಟ್ಟಣದ ಅ.ನ. ಕುಂದಾಪುರ ಮತ್ತು ಬಿ.ಬಿ. ಪದಕಿ ಟ್ರಸ್ಟ್​ಗೆ ನೀಡಿದ್ದಾರೆ.

ಪಟ್ಟಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಿವೃತ್ತ ಶಿಕ್ಷಕ ದಿ. ಬಿ.ಬಿ. ಪದಕಿ ಗುರುವಂದನಾ ಸಮಾರಂಭದಲ್ಲಿ ಅ.ನ. ಕುಂದಾಪುರ ಮತ್ತು ಬಿ.ಬಿ. ಪದಕಿ ಟ್ರಸ್ಟ್​ನ ಶೈಕ್ಷಣಿಕ ಉದ್ದೇಶಗಳಿಗೆ ವಿನಿಯೋಗಿಸಲು ತಮ್ಮ ಮೊದಲ ತಿಂಗಳದ ಹೆಚ್ಚುವರಿ ವೇತನದ ಮೊತ್ತವನ್ನು ನೀಡುವುದಾಗಿ ತಿಳಿಸಿದ್ದರು. ಅದರಂತೆ ಟ್ರಸ್ಟ್​ನ ಪದಾಧಿಕಾರಿಗಳಿಗೆ ಶುಕ್ರವಾರ ಚೆಕ್ ಹಸ್ತಾಂತರಿಸಿದರು.

ತಾಲೂಕಿನ ಜನತೆ ಪ್ರೀತಿ, ವಿಶ್ವಾಸದಿಂದ ಆಶೀರ್ವದಿಸಿರುವ ಕಾರಣ ಶಾಸಕನಾಗಿದ್ದೇನೆ. ಈಗಾಗಲೇ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೇನೆ. ಸಮುದಾಯ ಹಾಗೂ ವೈಯಕ್ತಿಕ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂದೆಯೂ ಈ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.

ಅ.ನ. ಕುಂದಾಪುರ ಹಾಗೂ ಬಿ.ಬಿ. ಪದಕಿ ಟ್ರಸ್ಟ್​ನ ಕಾರ್ಯದರ್ಶಿ ಗಿರೀಶ ದೇಶಪಾಂಡೆ, ಖಜಾಂಚಿ ಶರಶ್ಚಂದ್ರ ದೇಸಾಯಿ, ಪುರಸಭೆ ಮಾಜಿ ಅಧ್ಯಕ್ಷ ನಾಗಪ್ಪ ಸವದತ್ತಿ, ಪ್ರಮುಖರಾದ ಆರ್.ಸಿ. ದೇಸಾಯಿ, ಡಿ.ಜಿ. ಕುಲಕರ್ಣಿ ಇದ್ದರು.

ಶಾಸಕರಿಗೆ ಮಾನೆ ಮಾದರಿ: ಶಾಸಕರ ವೇತನ ದುಪ್ಪಟ್ಟು ಮಾಡಿ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧೇಯಕ ಅಂಗೀಕರಿಸಿದ ಮರುದಿನವೇ ಹೆಚ್ಚಾದ ವೇತನದ ಮೊತ್ತವನ್ನು ತಾಲೂಕಿನ ಸರ್ಕಾರಿ ಶಾಲೆ, ಕಾಲೇಜುಗಳ ಮೂಲಭೂತ ಸೌಲಭ್ಯ ದೊರಕಿಸಲು ವಿನಿಯೋಗಿಸುವುದಾಗಿ ಪ್ರಕಟಿಸುವ ಮೂಲಕ ರಾಜ್ಯದ ಎಲ್ಲ ಶಾಸಕರಿಗೆ ಶ್ರೀನಿವಾಸ ಮಾನೆ ಮಾದರಿಯಾಗಿದ್ದಾರೆ.