ಜಿಲ್ಲೆ

ಹಾನಗಲ್ಲ ಕುಮಾರೇಶ್ವರ ವಿರಕ್ತಮಠಕ್ಕೆ ಹುಸಿ ಬಾಂಬ್ ಕರೆ

ಹಾನಗಲ್ಲ: ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠಕ್ಕೆ ಬಾಂಬ್ ಇಟ್ಟಿದ್ದೇನೆ ಎಂದು 112 ಗಸ್ತು ವಾಹನ ಸಿಬ್ಬಂದಿಗೆ ಫೋನ್ ಕರೆ ಮಾಡಿದ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕರೆ ಮಾಡಿದ ಯುವಕ ತಾಲೂಕಿನ ಆರೆಗೊಪ್ಪ ಗ್ರಾಮದ ಹರೀಶ ಚಹ್ವಾಣ್ ಎಂಬಾತ ಬಂಧಿತ. ಈತ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹಾನಗಲ್ಲ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿ ಪೊಲೀಸರನ್ನು ಬೆಚ್ಚಿ ಬೀಳಿಸಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಶ್ರೀ ಮಠಕ್ಕೆ ಆಗಮಿಸಿ ಶೋಧ ನಡೆಸಿದ್ದಾರೆ. ಆದರೆ, ಬಾಂಬ್ ಪತ್ತೆಯಾಗಿಲ್ಲ.

ಕೊನೆಗೆ ಕರೆ ಮಾಡಿದ ಹರೀಶನನ್ನು ವಿಚಾರಿಸಲಾಗಿ ಆತ ನಾನು ಸುಳ್ಳು ಹೇಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಈಗ ಹರೀಶ ಪೊಲೀಸರ ವಶದಲ್ಲಿದ್ದಾನೆ. ಹಾನಗಲ್ಲ ಪಿಎಸ್​ಐ ಸಂಪತ್​ಕುಮಾರ ಅನಿಕಿವಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಭಯ ಮೂಡಿಸಿದ ಬಾಂಬ್ ಕರೆ: ಹಾನಗಲ್ಲ ಶ್ರೀ ಕುಮಾರೇಶ್ವರ ವಿರಕ್ತಮಠದ ಪೀಠಾಧಿಪತಿ, ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಧ್ಯಾಹ್ನ ಭೇಟಿ ನೀಡಿದ್ದಾರೆ. ನಂತರ ಈ ಕುರಿತು ದೂರವಾಣಿಯಲ್ಲಿ ವಿಜಯವಾಣಿಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ನಾನು ಮಠಕ್ಕೆ ಬರುತ್ತಿದ್ದಂತೆ ಬಾಂಬ್ ಸುದ್ದಿ ವಿಷಯ ತಿಳಿದಿದೆ. ನಂತರ ನಾನು ಒಂದು ಗಂಟೆ ನಾವು ಅಲ್ಲಿಯೇ ಇದ್ದೆ. ಬಾಂಬ್ ಸುದ್ದಿ ಹುಸಿ ಎಂದು ತಿಳಿಯಿತು. ಆದರೆ, ಶ್ರೀಮಠದ ವಿಷಯಕ್ಕೆ ಹಲವು ವಾದ-ವಿವಾದಗಳಿರುವ ಕಾರಣಕ್ಕೆ ಇದು ಭಯವನ್ನೂ ತಂದಿದೆ. ಇದು ವಿಷಾದಕರ ಘಟನೆ’ ಎಂದರು.