ಶಿಕಾರಿಪುರದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಜಯಂತ್ಯುತ್ಸವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಶ್ರೀ ಸದಾಶಿವ ಸ್ವಾಮೀಜಿ, ಬಿ.ಡಿ.ಭೂಕಾಂತ್, ಎನ್.ವಿ.ಈರೇಶ್, ನಿವೇದಿತಾ ರಾಜು ಇತರರಿದ್ದರು. 
ಜಿಲ್ಲೆ

ಹಾನಗಲ್ ಶ್ರೀಗಳು ವೀರಶೈವ ಸಮಾಜದ ಮಹಾಚೇತನ

ಶಿಕಾರಿಪುರ: ಹಾನಗಲ್ ಶ್ರೀ ಕುಮಾರಸ್ವಾಮಿಗಳೆಂದರೆ ವೀರಶೈವ ಸಮಾಜದಲ್ಲಿ ಹೊಸ ಬೆಳಕು ಮೂಡಿಸಿದ ಮರೆಯಲಾಗದ ಮಹಾಚೇತನ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ತಾಲೂಕು ಅಖಿಲ ಭಾರತ ವೀರಶೈವ ಸಮಾಜ ಭಾನುವಾರ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪೂಜ್ಯರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿ ಅದ್ಭುತ ವಾಗಿತ್ತು. ಎಲ್ಲ ಸಮಾಜಗಳಂತೆ ಹರಿದು ಹಂಚಿಹೋಗಿದ್ದ ವೀರಶೈವ ಸಮಾಜ ಒಂದಾಗಬೇಕು, ಅದು ಸಂಘಟಿತ ಶಕ್ತಿಯಾಗಿ ಹೊರಹೊಮ್ಮಬೇಕು ಎಂಬ ಆಶಯದಿಂದ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿ ಸಮುದಾಯದ ಅಭಿವೃದ್ಧಿಗೆ ಕಾರಣೀಭೂತರಾದರು ಎಂದರು.
ಧರ್ಮೋತ್ಥಾನ ಕಾರ್ಯಕ್ಕೆ ಪೂರಕವಾಗಿ ಶಿವಯೋಗ ಮಂದಿರವನ್ನು ಸ್ಥಾಪಿಸಿದ ಶ್ರೀಗಳು ಅಲ್ಲಿ ಮಠಗಳಿಗೆ ಸೂಕ್ತವಾದ ಶ್ರೀ ಗಳಾಗಬಲ್ಲಂತಹ ವಟುಗಳನ್ನು ನಿರ್ಮಾಣ ಮಾಡುತ್ತಿದ್ದರು. ಇಂದಿನ ಬಹುತೇಕ ಮಠಗಳ ಗುರುಗಳು ಶಿವಯೋಗ ಮಂದಿರದ ಕೊಡುಗೆ, ಶಿವಯೋಗ ಮಂದಿರವೆಂದರೆ ಅದೊಂದು ಶ್ರದ್ಧಾಕೇಂದ್ರವಾಗಿತ್ತು. ನಾಡಿನ ಪೂಜ್ಯರೆಲ್ಲರೂ ಒಂದೆಡೆ ಸೇರಿ ಸಮಾಜೋತ್ಥಾನಕ್ಕಾಗಿ ಚರ್ಚಿಸಲು ಅದೊಂದು ವೇದಿಕೆಯಾಗಿತ್ತು. ಯಾವತ್ತೂ ಯಾರಲ್ಲೂ ಕೈ ಒಡ್ಡದ ಮಹಾಂತರು ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಗಳು ಎಂದು ಹೇಳಿದರು.
ಶಿವಯೋಗ ಮಂದಿರದ ಬಿಸಿಲಿನ ತಾಪದಿಂದ ನೊಂದ ವಟುಗಳಿಗೆ ಕೆಲಕಾಲ ಮಲೆನಾಡಿನಲ್ಲಿ ತಂಗಲು ಶತಮಾನದ ಹಿಂದೆಯೇ ಕಾಳೇನಹಳ್ಳಿಯಲ್ಲಿ ಶಿವಯೋಗಾಶ್ರಮ ಸ್ಥಾಪನೆ ಮಾಡಿದರು. ಲಿಂಗೈಕ್ಯ ರುದ್ರಮುನಿ ಶ್ರೀಗಳು ಈ ಮಣ್ಣಿಗೆ ಕಾಯಕದ ಸಂದೇಶದ ಧಾರೆಯೆರೆದರೆ, ಲಿಂಗೈಕ್ಯ ಶ್ರೀ ರೇವಣಪ್ಪ ಸ್ವಾಮೀಜಿ ಅವರ ಪರಂಪರೆಯನ್ನು ಚಾಚೂ ತಪ್ಪದೆ ನಡೆಸಿಕೊಂಡು ಬಂದು ಶಿವಯೋಗಾಶ್ರಮ ಅಭಿವೃದ್ಧಿ ಮಾಡಿದರು ಎಂದರು.
ಮಲೆನಾಡಿಗೂ ಹಾನಗಲ್ ಕುಮಾರಸ್ವಾಮಿಗಳಿಗೂ ಅವಿನಾಭಾವ ಸಂಬಂಧ. ಆನಂದಪುರದ ಲಿಂಗೈಕ್ಯ ಶ್ರೀಗಳ ಒಡನಾಟ ಅವರಿಗೆ ಜಾಸ್ತಿ ಇದ್ದ ಕಾರಣ ಆಗಾಗ ಆನಂದಪುರಕ್ಕೆ ಬಂದು ಹೋಗುತ್ತಿದ್ದರು. ಆ ಸಮಯದಲ್ಲಿ ಮಲೆನಾಡಿನ ಸಮುದಾಯದ ಗುರುಗಳನ್ನು, ಶರಣರನ್ನೂ, ಹಿರಿಯರನ್ನು ಸೇರಿಸಿ ಸಮುದಾಯದ ಅಭಿವೃದ್ಧಿ ಕುರಿತು ಚರ್ಚೆ ಮಾಡುತ್ತಿದ್ದರು. ಅವರೊಬ್ಬ ಶ್ರೇಷ್ಠ ದಾರ್ಶನಿಕರೂ ಹೌದು, ವಿರಕ್ತರೂ ಹೌದು, ಮಹಾಂತರೂ ಹೌದು. ಅವರ ಸ್ಮರಣೆ ಮಾಡುವುದೇ ಪುಣ್ಯ ಎಂದು ಹೇಳಿದರು.
ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಎನ್.ವಿ.ಈರೇಶ್ ಅಧ್ಯಕ್ಷತೆ ವಹಿಸಿದ್ದರು. ಸಾಧನಾ ಅಕಾಡೆಮಿ ಮಂಜುನಾಥ್ ಮತ್ತು ಆಪ್ತ ಸಲಹೆಗಾರ ಧಾರವಾಡದ ಮಹೇಶ್ ಮಾಸಾಳ್ ಉಪನ್ಯಾಸ ನೀಡಿದರು. ಗಾಯಕಿ ದಿಯಾ ಹೆಗಡೆ ಗಾಯನ ಜನಮನ ಸೆಳೆಯಿತು. ಸಮಾಜದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೀರಶೈವ ಸಮಾಜದ ರಾಜ್ಯ ಸಮಿತಿ ಸದಸ್ಯ ಬಿ.ಡಿ.ಭೂಕಾಂತ್, ರಾಷ್ಟ್ರೀಯ ಕಾರ್ಯದರ್ಶಿ ನಿವೇದಿತಾ ರಾಜು, ನಗರ ಘಟಕದ ಅಧ್ಯಕ್ಷ ಗಿರೀಶ್ ಧಾರವಾಡ, ಮಹಿಳಾ ಘಟಕದ ಅಧ್ಯಕ್ಷೆ ಕಾಂಚನ ಕುಮಾರ್, ಶಿರಾಳಕೊಪ್ಪ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ನಗರ ಯುವ ಘಟಕದ ಅಧ್ಯಕ್ಷ ವೀರಣ್ಣಗೌಡ, ಸಿ.ಕೊಟ್ರೇಶ್ವರಪ್ಪ, ನಾಗರಾಜ ಸ್ವಾಮಿ, ಬಿಇಒ ಜಿ.ಎಸ್.ಶಶಿಧರ್ ಇತರರಿದ್ದರು.

ಛಲಬಿಡದ ತ್ರಿವಿಕ್ರಮ
ಇಂದು ಕಾಳೇನಹಳ್ಳಿಯ ಶಿವಯೋಗಾಶ್ರಮ ಲಿಂಗೈಕ್ಯ ಹಾನಗಲ್ ಶ್ರೀ ಕುಮಾರಸ್ವಾಮಿಗಳ ಆಶಯದಂತೆ ಅಭಿವೃದ್ಧಿ ಹೊಂದುತ್ತಿದೆ. ಇಂದಿನ ಪೀಠಾಧ್ಯಕ್ಷರಾದ ಅನುಷ್ಠಾನ ಮೂರ್ತಿ ಡಾ. ಸಿದ್ದಲಿಂಗ ಸ್ವಾಮೀಜಿ ಅನುಷ್ಠಾನ, ಜಪ ತಪಗಳ ಬಲದಿಂದ ಪುಣ್ಯದ ನಾಡಾಗಿದೆ. ಅಲ್ಲಿ ಅಧ್ಯಾತ್ಮದ ಧಾರೆ ಹರಿಯುತ್ತಿದೆ. ಪೂಜ್ಯರ ಸಂಕಲ್ಪಶಕ್ತಿಯಿಂದ ದಿನೇ ದಿನೆ ಶಿವಯೋಗಾಶ್ರಮ ನಾಡಿನ ಧರ್ಮಾಭಿಮಾನಿಗಳನ್ನು, ಭಕ್ತರನ್ನು ಸೆಳೆಯುತ್ತಿದೆ. ಬರುವ ದಿನಗಳಲ್ಲಿ ಇದೊಂದು ನಾಡಿನ ಶ್ರೇಷ್ಠ ಆಧ್ಯಾತ್ಮಿಕ ಕ್ಷೇತ್ರವಾಗುವದರಲ್ಲಿ ಸಂದೇಹವಿಲ್ಲ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಹಾನಗಲ್ ಕುಮಾರಸ್ವಾಮಿಗಳು ಸಮುದಾಯ ಪ್ರಜ್ಞೆ ಮೂಡಿಸಿದ ಮಹಾತ್ಮರು. ಇದರಿಂದ ವೀರಶೈವ ಸಮಾಜ ಮೈ ಕೊಡವಿ ಮೇಲೇಳಲು ತನ್ನತನದಿಂದ ಪ್ರಕಾಶಿಸಲು ಸಾಧ್ಯವಾಯಿತು. ಅವರ ಪವಾಡವೆಂದರೆ ಸಮಾಜದ ಸಂಘಟನೆ. ನಮ್ಮ ಆಚಾರ-ವಿಚಾರ, ಸಂಪ್ರದಾಯ-ಪರಂಪರೆಗಳ ಉಳಿವಿಗೆ ಅವರ ಕೊಡುಗೆ ಅಪಾರ. ಅವರೊಬ್ಬ ಛಲಬಿಡದ ತ್ರಿವಿಕ್ರಮ, ಹಿಡಿದ ಕಾರ್ಯವನ್ನು ಮುಗಿಸದೇ ಪೂಜ್ಯರು ವಿರಮಿಸುತ್ತಿರಲಿಲ್ಲ. ಅವರೊಬ್ಬ ಸಾತ್ವಿಕ ಶಕ್ತಿಯಾಗಿದ್ದರು ಎಂದು ಹೇಳಿದರು.