ಕಮಲಾಪುರದ ಪುರಾತತ್ವ ಇಲಾಖೆ ಕಚೇರಿ ಆವರಣದಲ್ಲಿ‌ ಶನಿವಾರ ಹಮ್ಮಿಕೊಂಡಿದ್ದ ವಿಜಯನಗರ ಅಧ್ಯಯನ ವಾರ್ಷಿಕ ವಿಚಾರ ಸಂಕಿರಣವನ್ನು ನಿವೃತ್ತ ಪ್ರೊ. ಎಂ.ವಿ.ಶ್ರೀನಿವಾಸ್ ಉದ್ಘಾಟಿಸಿದರು. ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಪುರಾತತ್ವ ಇಲಾಖೆ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ, ಕಾವ್ಯಶ್ರೀ ಇದ್ದರು. 
ಜಿಲ್ಲೆ

ವಿಜಯನಗರ ಇತಿಹಾಸ ಕುರಿತ‌ ಅಧ್ಯಯನ ಅಗತ್ಯ- ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಮತ

ಶಶಿಧರ ಎಲ್

ಹಂಪಿ: ವಿಜಯನಗರ ಸಾಮ್ರಾಜ್ಯದ ಅವನತಿ ಕುರಿತು ಇತಿಹಾಸಕಾರರಲ್ಲಿ ಸ್ಪಷ್ಟತೆ ಮೂಡಲು ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ಹೆಚ್ಚಿನ ಅಧ್ಯಯನ ಅಗತ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಹಂಪಿ ಉತ್ಸವ ಅಂಗವಾಗಿ ಶನಿವಾರ ಕಮಲಾಪುರದ ಪುರಾತತ್ತ್ವ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿಜಯನಗರ ಅಧ್ಯಯನ ಕುರಿತ 27ನೇ ವಾರ್ಷಿಕ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ತುಳು, ಸಾಳ್ವ ಹಾಗೂ ಅರವೀಡು ವಂಶಗಳು ಆಳಿವೆ. ಸಂಗಮ, ತುಳು ವಂಶಗಳ ಅರಸರ ಬಗ್ಗೆ ಅಧ್ಯಯನಗಳು ನಡೆದಿವೆ. ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ವ್ಯಾಪಕ ಅಧ್ಯಯನಗಳಾಗಿಲ್ಲ. ವಿಜಯನಗರ ಕುರಿತು ಈವರೆಗೂ ನಡೆದ ಸಂಶೋಧನೆಗಳ ಮರು ಅಧ್ಯಯದ ಅವಶ್ಯಕತೆಯಿದೆ.

ವಸ್ತುನಿಷ್ಠ, ಬಹುತ್ವ ಹಾಗೂ ವಿಶಾಲ ದೃಷ್ಠಿಕೋನದಿಂದ ಅಧ್ಯಯನವಾಗಬೇಕಿದೆ. ಇತಿಹಾಸಕಾರರು ಅರವೀಡು ವಂಶ ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಅವರು ಆಂಧ್ರದ ಕರ್ನೂಲು ಮೂಲದವರು. ಇವರ ಆಡಳಿತ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹಂಚಿಕೆಯಾಗಿತ್ತು. ರಕ್ಕಸತಂಗಡಿ ಯುದ್ದದಲ್ಲಿ ಸಾಮ್ಯಾಜ್ಯ ರಕ್ಷಣೆಗಿಂತ ತಮ್ಮ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆ ಪ್ರಾಮುಖ್ಯತೆ ನೀಡಿದರು ಎಂಬ ಭಾವನೆಯಿದೆ.

ಅರವೀಡು ವಂಶದ ಅಧ್ಯಯನಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳ ಸಾಹಿತ್ಯ ಹಾಗೂ ಐತಿಹ್ಯಗಳನ್ನು ಒಗ್ಗೂಡಿಸಿ ಸಂಶೋಧನೆ ಮಾಡಬೇಕಿದೆ. ಇದು ಬಹು ಭಾಷೆಯ ಜ್ಞಾನ ಇಲ್ಲದ ಇತಿಹಾಸಕಾರಿಗೆ ತೊಡಕಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.

ತಾತಪಿನ್ನಮ, ಸೋಮಿದೇವ, ರಾಘವದೇವ, 2ನೇ ಪಿನ್ನಮ, ಅರವೀಡು ಬುಕ್ಕ, ಅರವೀಡು ರಾಮರಾಜ, ಶ್ರೀರಂಗರಾಜ, ತಿರುಮಲ ಹಾಗೂ ಅಳಿಯ ರಾಮರಾಯ ಅರವೀಡು ವಂಶಕ್ಕೆ ಸೇರಿದವರು. ಇವರಲ್ಲಿ ತಿರುಮಲ, ಕೃಷ್ಣ ದೇವರಾಯನ ಅಳಿಯನಾಗಿದ್ದು, ರಕ್ಕಸತಂಗಿಡಿ ಯುದ್ದದ ಬಳಿಕ ಹರಿದು ಹೊಂಚಿಹೋದ ಪ್ರದೇಶಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ. ಸಾಮ್ರಾಜ್ಯ ವಿಸ್ತರಣೆ ಮಾಡಿದ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರೋಫೆಸರ್ ಎಂ.ವಿ.ಶ್ರೀನಿವಾಸ್, ಹಂಪಿ ಉತ್ಸವದ ವಿಚಾರ ಸಂಕಿರಣದಲ್ಲಿ ವಿಜಯನಗರ ಸಾಮ್ರಾಜ್ಯದ ಬಗೆಗಿನ ಅಧ್ಯಯನ ಪಾವಿತ್ರ‍್ಯತೆತೆ ಹಾಳುಮಾಡಿಲ್ಲ. ಸಂಶೋಧನಾ ಪ್ರಬಂಧಗಳಲ್ಲಿ ಬೌದ್ಧಿಕ ಶ್ರೇಷ್ಠತೆ ಕಾಪಾಡಿಕೊಂಡು ಬರಲಾಗಿದೆ. ಕದಂಬ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಸೇರಿ ಹತ್ತಾರು ಸಾಮ್ರಾಜ್ಯಗಳು ಕರ್ನಾಟಕದಲ್ಲಿ ಆಳ್ವಿಕೆ ನಡೆಸಿವೆ. ಆದರೆ ವಿಜಯನಗರ ಸಾಮ್ಯಾಜ್ಯದ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿವೆ.

ರೋಮ್ ಸಾಮ್ರಾಜ್ಯದ ಹೊರತಾಗಿ ವಿಶ್ವದಲ್ಲೇ ಅತಿ ಹೆಚ್ಚು ಸಂಶೋಧನೆಗಳು ವಿಜಯನಗರ ಸಾಮ್ರಾಜ್ಯದ ಕುರಿತಾಗಿವೆ. ಇದುವರೆಗೂ ಬೃಹತ್ ಹಾಗೂ ಸೂಕ್ಷ್ಮ ಸ್ತರದಲ್ಲಿ ವಿಜಯನಗರ ಸಾಮ್ರಾಜ್ಯದ ಕುರಿತು ಅಧ್ಯಯನಗಳಾಗಿವೆ. ಸಂಕುಚಿತ ದೃಷ್ಟಿ ಬದಲಾಗಿ ವಿಶಾಲ ಹಾಗೂ ವೈಜ್ಞಾನಿಕ ದೃಷ್ಟಿಕೋನ ನೀಡಲು ಪ್ರಯತ್ನಿಸಲಾಗಿದೆ. ವಿಜಯನಗರ ಅರಸರ ಸರ್ವತೋಮಖ ಕೊಡುಗೆಗಳ ಅಧ್ಯಯನ ಮಾಡಲಾಗಿದೆ ಎಂದು ತಿಳಿಸಿದರು.

ಪುರಾತತ್ತ್ವ ಇಲಾಖೆ ನಿರ್ದೇಶಕ ಡಾ.ಆರ್.ಶೇಜೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. 61 ವಿದ್ವಾಂಸರು 6 ಗೋಷ್ಠಿಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಇದೇ ವೇಳೆ ಪ್ರವಾಸಿ ಮಿತ್ರರರಿಗೆ ಸಮವಸ್ತ್ರ ವಿತರಿಸಲಾಯಿತು.

ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖ ಗೌಡ, ಕಲಮಲಾಪುರ ಪಪಂ ಉಪಾಧ್ಯಕ್ಷ ಗೋಪಾಲಕೃಷ್ಣ, ಪುರತತ್ವ ಇಲಾಖೆ ಉಪನಿರ್ದೇಶಕಿ ಕಾವ್ಯಶ್ರೀ, ತಹಸೀಲ್ದಾರ್ ಶೃತಿ.ಎಂ, ಪುರತತ್ವ ಸಹಾಯಕರಾದ ಡಾ.ಆರ್.ಮಂಜನಾಯ್ಕ್ ಇತರರಿದ್ದರು.

ಮಕ್ಕಳಿಗೆ ಹಂಪಿ ಇತಿಹಾಸ ತಿಳಿಸಿ

ಇಂದಿನ ಮಕ್ಕಳು ಕೃತಕ ಬುದ್ದಿಮತ್ತೆ ಯುಗದಲ್ಲಿ ಕಳೆದು ಹೋಗುತ್ತಿದ್ದಾರೆ. ಇವರಿಗೆ ಇತಿಹಾಸ ಪರಿಚಯವಾಗಬೇಕು. ಇದುವರೆಗೂ ಹಂಪಿ ಉತ್ಸವದ ಅಂಗವಾಗಿ ಏರ್ಪಡಿಸಿದ ವಿಚಾರ ಸಂಕಿರಣಗಳ ಸಂಶೋಧನೆಯ ಶೇ.10 ರಷ್ಟು ಸಾರ ಜನರಿಗೆ ತಲುಪಿಲ್ಲ ಎಂದು ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ವಿಷಾದ ವ್ಯಕ್ತಪಡಿಸಿದರು.

ಇತಿಹಾಸ ಜ್ಞಾನ ನಶಿಸಿ ಹೋಗುತ್ತಿದೆ. ಕ್ಷೇತ್ರದಲ್ಲಿ 120 ಸರ್ಕಾರಿ ಶಾಲೆಗಳಿವೆ. ಪುರಾತತ್ತ್ವ ಇಲಾಖೆಯಿಂದ ಇತಿಹಾಸ ಕುರಿತು ಸಂವಾದ, ವಿಚಾರ ಸಂಕಿರಣ, ಕ್ಷೇತ್ರ ಭೇಟಿಗಳನ್ನು ಏರ್ಪಡಿಸಿ. ಶಾಸಕರ ಅನುದಾನದಲ್ಲಿ ಮಕ್ಕಳಿಗೆ ಬಸ್ ಹಾಗೂ ಊಟದ ಸೌಲಭ್ಯ ನೀಡುತ್ತೇನೆ. ಪುರಾತತ್ತ್ವ ಇಲಾಖೆ ವಿಜಯನಗರ ಸಾಮ್ರಾಜ್ಯದ ಜ್ಞಾನವನ್ನು ಮಕ್ಕಳಿಗೆ ಹಂಚುವ ಕೆಲಸ ಮಾಡಲಿ ಎಂದರು.