ಹಂಪಿ (ವಿರೂಪಾಕ್ಷೇಶ್ವರ ದೇವಾಲಯ ವೇದಿಕೆ): ಹಂಪಿ ಉತ್ಸವದ ಎರಡನೇ ದಿನ ನಡೆದ ಕವಿಗೋಷ್ಠಿ ಪ್ರಸಕ್ತ ದಿನಗಳ ಜನತ ತಳಮಳ ಬಿಚ್ಚಿಟ್ಟವು. ಆಧುನಿಕತೆ, ಬದಲಾದ ಜೀವನ, ಆಲೋಚನೆಗಳು, ಪರಿಸರ ಹಾನಿ, ನೀತಿ-ನಿಯಮಗಳು, ಜನರ ನೋವು, ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ವಿಟ್ಟವು. ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೂ ಇದ್ದವರ ಮನಸೂರೆಗೊಂಡವು.
50ಕ್ಕು ಹೆಚ್ಚು ಹಿರಿ, ಕಿರಿ, ಅನುಭವಿ ಕವಿಗಳು ತಮ್ಮದೇ ಶೈಲಿಯ ಏರಿಳಿತ, ಭಾವಗಳನ್ನು ಬಳಸಿ ಕವನ ವಾಚಿಸಿದರು. ಜಗದೀಶ ಅವರ 'ಓ ಕವಿತೆಯೇ ನೀನೇ ಹೇಳು.. ಎನ್.ಎಂ.ರವಿಕುಮಾರ್ ಅವರ 'ಹೊಸತು'.. ಚತ್ರಪ್ಪ ತಂಬೂರಿ ಅವರ ' ತೆಪ್ಪಗಿರಿ'... ಶಿ.ಕಾ.ಬಡಿಗೇರ ಅವರ 'ನಮಗ ಇನ್ನೊಂದು ಗ್ಯಾರಂಟಿ ಕೊಡ್ರಿ' ..ಗಣೇಶರಾವ್ ಹವಾಲ್ದಾರ್ ಅವರ 'ರಂಗಪ್ಪನ ಬದುಕು', ಡಾ.ಯಲ್ಲಪ್ಪ ಕೆ.ಕೆ.ಪುರ ಅವರ 'ಗಜಲ್ ಗೆಳತಿ', ಡಾ.ನಾಗಣ್ಣ ಕಿಲಾರಿ ಅವರ 'ಶಾಂತಿ ನಮ್ಮ ತೇರು' , ಡಾ.ಬಸು ಅವರ 'ಹೇಗೆ ಕೊಲ್ಲುವಿರಿ ನೀವು ಗಾಂಧಿಯನ್ನು' ಎಂಬ ಕವಿತೆಗಳು ಜನರ ಪ್ರಶಂಸೆ ಪಡೆದವು.
ಕವಿಗೋಷ್ಠಿ ಉದ್ಘಾಟಿಸಿದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕವಿಗಳು ವಾಸ್ತವ ಜಗತ್ತಿಗೆ ದನಿಯಾಗಿ. ಆಳ ಅಧ್ಯಯನ ನಡೆಸಿ. ಪಂಪ, ಕುವೆಂಪು, ಸೇರಿ ಹಿರಿಯ ಕವಿಗಳ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು. 10ನೇ ಶತಮಾನದ ಪಂಪ, ರನ್ನ, ಪುರಂದರದಾಸ, ಕನಕದಾಸರು ಇಂದಿಗೂ ನಮಗೆ ಪ್ರಸ್ತುತ. ಶರಣರು, ದಾಸರು ತೀರ್ಥ ಕ್ಷೇತ್ರಗಳನ್ನು ಒಪ್ಪಲಿಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಪ್ರತಿಪಾದಿಸಿದರು.
ಕವಿಗೋಷ್ಠಿಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತಾಗಬೇಕು. ಕಾವ್ಯ ಕೇಳುವ ಜನ ಕಡಿಮೆಯಾಗುತ್ತಿರುವ ಬಗ್ಗೆ ಚಿಂತನೆ ಅಗತ್ಯ. ಕಾಲ, ಪರಿಸ್ಥಿತಿಗೆ ತಕ್ಕಂತೆ ಕವಿ ಬದಲಾಗಲಿ. ದಸರಾ ಕವಿಗೋಷ್ಠಿ ಪುಸ್ತಕ ರೂಪದಲ್ಲಿ ಹೊರ ಬರುತ್ತದೆ. ಅದರಂತೆ ಹಂಪಿ ಉತ್ಸವ ಕವಿಗೋಷ್ಠಿಯೂ ಪುಸ್ತಕ ರೂಪದಲ್ಲಿ ಬರಲಿ ಎಂದು ಆಶಿಸಿದರು.
ಸಾಹಿತಿ ರಮೇಶ ಗಬ್ಬೂರ್ ಆಶಯ ನುಡಿ ಆಡಿ ಮಾತನಾಡಿ, ಕವಿತೆಗಳು ನಾಡು, ದೇಶ ಕಟ್ಟುವಂತಿರಲಿ. ಶಾಶ್ವತ ವಿರೋಧ ಪಕ್ಷವಾಗಿರಲಿ. ಸಮಾಜದ ಅಸಮಾನತೆ, ಮೂಢನಂಬಿಕೆಗಳ ವಿರುದ್ದ ಪ್ರಶ್ನೆಗಳನ್ನು ಹುಟ್ಟು ಹಾಕಬೇಕು. ಬಣ್ಣ ಮತ್ತು ಬಣಗಳು ಇಂದಿನ ಕಾಲದ ಕವಿ ಚಿಂತನೆಗಳಿಗೆ ಅಡ್ಡಿಯಾಗಿವೆ. ಕಾವ್ಯ ಎಲ್ಲರನ್ನೂ ಕೂಡಿಸಿಕೊಂಡು ಹೋಗುವ ಕೂಡಲ ಸಂಗಮವಾಗಬೇಕು. ಬದುಕು ಬದಲಾಯಿಸುವ ಉತ್ತಮ ಕಾವ್ಯಗಳನ್ನು ರಚಿಸಬೇಕು. ಒಂದು ಶಬ್ದವು ಕವಿತೆಯಾಗುತ್ತದೆ. ಅವ್ವ ಕವನದಲ್ಲಿ ಲಂಕೇಶರು ತಾಯಿಯನ್ನು ಫಲವತ್ತಾದ ಕಪ್ಪು ನೆಲಕ್ಕೆ ಹೋಲಿಸಿದ್ದಾರೆ. ಕವಿತೆಗೆ ಜೇಬುಗಳು ಇರಬಾರದು. ಗತಕಾಲದ ಹಿಂದಿನ ಕವಿಗಳ ಆಶಯವನ್ನು ಇಟ್ಟುಕೊಂಡು ನಾವು ಕವಿತೆಗಳನ್ನು ರಚಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ನಮ್ಮ ಭಾಗದಲ್ಲಿ ಹಲವಾರು ಕವಿಗಳಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ಸವದಲ್ಲಿ ಕವಿಗೋಷ್ಠಿ ಆಯೋಜಿಸಲಾಗಿದೆ. ಎಲ್ಲರೂ ಕವಿ, ಸಾಹಿತಿಗಳಾಗಲು ಸಾಧ್ಯವಿಲ್ಲ. ಕೆಲವರಿಗೆ ಮಾತ್ರ ಕವಿತೆಗಳನ್ನು ಬರೆಯುವ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು.
ಜಿಪಂ ಸಿಇಒ ನೋಗ್ಜಾಯ್ ಮೋಹ್ಮದ್ ಅಲಿ ಅಕ್ರಮ್ ಷಾ ಮಾತನಾಡಿದರು. ಕಲಾವಿದರಾದ ಮ. ಬ. ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಅಖಂಡ ಬಳ್ಳಾರಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಸಿದ್ದರಾಮ ಕಲ್ಮಠ, ಸಾಹಿತಿಗಳಾದ ಸೋ.ದಾ. ವಿರೂಪಾಕ್ಷಗೌಡ, ಡಾ.ವೀರೇಶ ಉತ್ತಂಗಿ, ಪ್ರಾಚಾರ್ಯರಾದ ನಾಗರಾಜ್ ಹವಾಲ್ದಾರ್. ಜಿ. ಕೊಟ್ರೇಶ ಇತರರಿದ್ದರು.