ಹಂಪಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ಹಂಪಿ ಉತ್ಸವಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಲಾಯಿತು. ಸಚಿವರಾದ ಜಮೀರ್ ಅಹಮದ್ ಖಾನ್, ಶಿವರಾಜ ತಂಗಡಗಿ, ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ, ಡಿಸಿ ಎಂ.ಎಸ್.ದಿವಾಕರ ಇತರರಿದ್ದರು. 
ಜಿಲ್ಲೆ

ಹಂಪಿ ಉತ್ಸವ ಮುಂದಿನ ವರ್ಷ ಮತ್ತಷ್ಟು ಅದ್ದೂರಿ, ಸಚಿವ ಜಮೀರ್ ಖಾನ್ ಭರವಸೆ

ವಿ.ಕೆ. ರವೀಂದ್ರ ಹಂಪಿ (ಎಂ.ಪಿ.ಪ್ರಕಾಶ ವೇದಿಕೆ)

ಮುಂದಿನ ವರ್ಷ ನಾನು ಸಚಿವನಾಗಿದ್ದರೆ ಹಂಪಿ ಉತ್ಸವವನ್ನು ಇದಕ್ಕಿಂತ ಅದ್ದೂರಿಯಾಗಿ ಉತ್ಸವ ಮಾಡುವೆ. ಈ ಬಾರಿ ಉತ್ಸವ ಹೇಗೆ ಆಯೋಜಿಸಲಾಗಿದೆ ಎಂದು ಜನರೇ ಹೇಳಬೇಕು. ಜನರು ನನ್ನ ಮೇಲೆ ಅಪಾರ ಪ್ರೀತಿ ಇಟ್ಟಿದ್ದಾರೆ. ದೇವರು ಇನ್ನಷ್ಟು ಜನರ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫೃ್, ವಸತಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಮೂರು ದಿನ ಹಮ್ಮಿಕೊಂಡಿರುವ ಹಂಪಿ ಉತ್ಸವಕ್ಕೆ ಶುಕ್ರವಾರ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮನೆಮನೆಗಳಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ನಮ್ಮ ನಾಯಕರಾಗಿದ್ದ ಎಂ.ಪಿ.ಪ್ರಕಾಶ ಅವರು ಉತ್ಸವಕ್ಕೆ ಚಾಲನೆ ನೀಡಿದ್ದರು. ನಮ್ಮ ನಾಯಕರಾದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರಬೇಕಿತ್ತು. ಅನಾರೋಗ್ಯ ಕಾರಣದಿಂದ ಬಂದಿಲ್ಲ. ಅದಕ್ಕೆ ಜನರಲ್ಲಿ ಕ್ಷಮೆ ಕೇಳುವಂತೆ ತಿಳಿಸಿದ್ದಾರೆ. ಬರಲೇಬೇಕೆಂದು ಮುಂದೂಡಲು ಹೇಳಿದರು.

ಆದರೆ, ತಡವಾಗಲಿದೆ ಎಂದು ನಿಗದಿಯಾದ ದಿನಾಂಕಕ್ಕೆ ಮಾಡುತ್ತಿದ್ದೇವೆ. ಸಚಿವನಾಗಿ ಎರಡನೇ ವರ್ಷ ಉತ್ಸವ ಆಚರಿಸುತ್ತಿರುವುದಕ್ಕೆ ಖುಷಿ ಎನಿಸುತ್ತಿದೆ. ಮೂರು ದಿನ ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಂಭ್ರಮಿಸಿ. ಹಂಪಿ ಉತ್ಸವ ನಾಡ ಉತ್ಸವ. ಕೇವಲ ನಾಲ್ಕೈದು ಜಿಲ್ಲೆಗೆ ಸೀಮಿತವಲ್ಲ. ಪ್ರತಿ ವರ್ಷ ಅದ್ದೂರಿಯಾಗಿ ಉತ್ಸವ ಆಯೋಜಿಸಲಾಗುತ್ತಿದೆ. ಮುಂದಿನ ವರ್ಷ ಇನ್ನಷ್ಟು ವೈಭವದಿಂದ ಉತ್ಸವ ಮಾಡೋಣ.

ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ವಿದ್ಯಾರಣ್ಯಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಂಸದರಾದ ಈ. ತುಕಾರಾಮ್, ರಾಜಶೇಖರ ಹಿಟ್ನಾಳ, ಶಾಸಕರಾದ ನೇಮಿರಾಜ ನಾಯ್ಕ, ಎನ್.ಟಿ. ಶ್ರೀನಿವಾಸ, ಕೃಷ್ಣ ನಾಯ್ಕ, ಲತಾ ಮಲ್ಲಿಕಾರ್ಜುನ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಆನೆಗೊಂದಿ ರಾಜ ವಂಶಸ್ಥ ಶ್ರೀಕೃಷ್ಣದೇವರಾಯ, ಡಿಸಿ ಎಂ.ಎಸ್.ದಿವಾಕರ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಬಿ.ಎಲ್. ಶ್ರೀಹರಿಬಾಬು ಇತರರಿದ್ದರು.

ಬಾರದ ಮುಖ್ಯಮಂತ್ರಿ, ಡಿಸಿಎಂ

ಹಂಪಿ: ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಬೇಕಿತ್ತು. ಅನಾರೋಗ್ಯ ಹಾಗೂ ಬಜೆಟ್ ಪೂರ್ವಭಾವಿ ಸಭೆ ಕಾರಣ ಸಿಎಂ ಬರಲಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಗೈರಾದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟನೆ ನೆರವೇರಿಸಿದರು. ಸಿಎಂ ಬಾರದಿದ್ದರೂ ನಿಗದಿಯಂತೆ ಸಂಜೆ 6 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಆಗಲಿಲ್ಲ. ಸಚಿವ ಶಿವರಾಜ ತಂಗಡಗಿ 8 ಗಂಟೆಗೆ ಆಗಮಿಸಿದರು. ಜನರು ನಿರೀಕ್ಷೆಯಂತೆ ಬಾರದೆ ಕುರ್ಚಿಗಳು ಖಾಲಿಯಿದ್ದ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭಿಸಲಾಯಿತು. ಬಳ್ಳಾರಿ ಸಂಸದ ಈ.ತುಕಾರಾಮ್ ಅವರೂ ಗೈರಾಗಿದ್ದರು.

ಜನರನ್ನು ರಂಜಿಸಿದ ಗಾಯಕರು

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜನಪದ ಗಾಯಕರಾದ ಹನುಮಂತ, ಶ್ರೀರಾಮ್ ಕಾಸರ್ ಹಾಗೂ ಉಮಾ ಅವರು ಶಿಶುನಾಳ ಶರೀಫರ ತತ್ವಪದ ‘ತರವಲ್ಲ ತಂಗಿ ನಿನ್ನ ತಂಬೂರಿ ಸ್ವರ’, ಜಾನಪದ ಗೀತೆ ‘ಕೇಳೊ ಜಾಣ ಶಿವ ಧ್ಯಾನ ಮಾಡಣ್ಣ’, ‘ಹಾವಾದ್ರು ಕಚ್ಚಾಬಾರ್ದಾ’, ‘ ಕೇಳೋ ಮಹಾದೇವ’, ‘ರಾಮ ನಾಮ ಹಾಡಿರೋ’ ಹಾಡುಗಳನ್ನು ಹಾಡಿ ನೆರೆದವರನ್ನು ರಂಜಿಸಿದರು.