ಎಂ.ಪಿ.ಪ್ರಕಾಶ ವೇದಿಕೆಯಲ್ಲಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ ನಟ ವಿಜಯ ರಾಘವೇಂದ್ರ, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್ ಮುಖರ್ಜಿ, ವಶಿಷ್ಠ ಸಿಂಹ. 
ಜಿಲ್ಲೆ

ಹಂಪಿ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಕನ್ನಡ ಸಿನಿಮಾ ತಾರೆಯರು

ಹಂಪಿ (ಎಂ.ಪಿ.ಪ್ರಕಾಶ ವೇದಿಕೆ): ಎರಡನೇ ದಿನ ಎಂ.ಪಿ.ಪ್ರಕಾಶ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಸಿನಿ ತಾರೆಯರು ವೇದಿಕೆ ಮೇಲೆ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ ಜನರನ್ನು ರಂಜಿಸಿದರು.

ಚಂದನವನದ ಚಿನ್ನಾರಿಮುತ್ತ ವಿಜಯ ರಾಘವೇಂದ್ರ, ವಶಿಷ್ಠ ಸಿಂಹ, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್ ಮುಖರ್ಜಿ ಅನೇಕ ಹಾಡುಗಳಿಗೆ ಹೆಜ್ಜೆ ಹಾಕಿದರು. ಸಿನಿಮಾ ಡೈಲಾಗ್ ಹೇಳಿ ಜನರನ್ನು ರಂಜಿಸಿದರು.

ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರಾದ ವಾಸುಕಿ ವೈಭವ, ಅರ್ಜುನ್ಯ ಸಂಗೀತದ ಝಲಕ್ ಹಾಗೂ ಸಿನಿಮಾ ಹಾಡುಗಳಿಗೆ ಜನ ಹೆಜ್ಜೆ ಹಾಕಿದರು. ಸರಿಗಮಪ ಖ್ಯಾತಿಯ ಬಾಳು ಬೆಳಗುಂದಿ ಅವರ ಜನಪದ ಗಾಯನಕ್ಕೆ ಹಂಪಿ ಜನರು ಮನಸೋತರು.

ಗೊಂಬೆ ಹೇಳುತೈತೆ ಹಾಡಿಗೆ ಪ್ರೇಕ್ಷಕರು ನಟ ಪುನೀತ್ ರಾಜ್ಕುಮಾರ್ ಫೋಟೋ ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.

ಇಂದು ಸಮಾರೋಪ

ಮೂರು ದಿನಗಳ ವೈಭವದ ಹಂಪಿ ಉತ್ಸವಕ್ಕೆ ಭಾನುವಾರ ತೆರೆ ಬೀಳಲಿದೆ. ಗಾಯತ್ರಿ ಪೀಠ ಬಳಿಯ ಎಂ.ಪಿ.ಪ್ರಕಾಶ ಮುಖ್ಯ ವೇದಿಕೆಯಲ್ಲಿ ರಾತ್ರಿ ಸಮಾರೋಪ ಸಮಾರಂಭ ಇರಲಿದೆ. ಇದಕ್ಕೂ ಮುನ್ನ ಬೆಂಗಳೂರಿನ ಗಿಲಾನಿ ಮೆಲೋಡಿಯಸ್‌ನಿಂದ ಗಾಯನ, ದಾವಣಗೆರೆ ನೂಪುರ ಕಲಾ ಸಂಸ್ಥೆಯಿಂದ ನೃತ್ಯ ರೂಪಕ, ಬೆಂಗಳೂರಿನ ಅರ್ಥ್ ಚಾರಿಟೇಬಕ್ ಟ್ರಸ್ಟ್ ನಿಂದ ಬ್ಯಾಲೆಟ್ ನೃತ್ಯ, ಚಮ್ಮಿನ್ ತಂಡದಿಂದ ಕೇರಳ ಶೈಲಿಯ ಪ್ಯೂಜನ್ ಸಂಗೀತ ಜನರಿಗೆ ಮನರಂಜಿಸಲಿದೆ.

ಎಂ.ಪಿ.ಪ್ರಕಾಶ ವೇದಿಕೆಯಲ್ಲಿ ಶನಿವಾರ ಕಂಡುಬಂದ ಜನಸ್ತೋಮ. (ಚಿತ್ರ: ನಾಗರೆಡ್ಡಿ ಹಡಗಲಿ)

ಜತೆಗೆ ಕರಾವಳಿಯ ವಿಶೇಷ ಹುಲಿ ನೃತ್ಯ ತಂಡದಿಂದ ನೃತ್ಯ, ಉಕ ಗಾಯಕ ಮಾಳು ನಿಪನಾಳ ಅವರ ಜನೊದ ಗಾಯನ, ಬೆಂಗಳೂರಿನ ನುರಿತ ನೃತ್ಯಗಾರರ ತಂಡದಿಂದ ವಿಜಯನಗರ ವೈಭವ ಕುರಿತ ವಿಶೇಷ ನೃತ್ಯ, ಸಂಗೀತ ನಿರ್ದೇಶಕ ಗುರುಕಿರಣ್ ತಂಡ ಹಿನ್ನೆಲೆ ಗಾಯನ ಪ್ರಸ್ತುತ ಪಡಿಸಲಿದೆ. ನಟಿಯರಾದ ರಾಗಿಣಿ ದ್ವೀವೇದಿ, ಶೃತಿ ಹರಿಹರನ್, ಭಾವನಾ ರಾವ್, ಐಂದ್ರಿತಾ ರೈ, ನಟ ದಿಗಂತ್ ಮನರಂಜನೆ ನೀಡಲಿದ್ದಾರೆ.

ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವ ಕಡಲೆಕಾಳು ಗಣಪ ದೇವಾಲಯ. (ಚಿತ್ರ: ನಾಗರೆಡ್ಡಿ ಹಡಗಲಿ)