ದಾವಣಗೆರೆಯ ನೂಪುರ್ ಕಲಾ ಸಂಸ್ಥೆ ಕಲಾವಿದರು ನವದುರ್ಗೆಯರ ಭಕ್ತಿ ಭಾವದ ನೃತ್ಯ ಪ್ರದರ್ಶಿಸಿದರು. 
ಜಿಲ್ಲೆ

ಹಂಪಿ ಉತ್ಸವದಲ್ಲಿ ಕನ್ನಡದ ಪ್ರಸಿದ್ಧ ರಾಕ್ ಬ್ಯಾಂಡ್ ಗಾನಾ ಬಜಾನಾ

ಹಂಪಿ: ಕನ್ನಡದ ಪ್ರಸಿದ್ಧ ರಾಕ್ ಬ್ಯಾಂಡ್ ‘ಡಾರ್ಕ್ ರೋಡ್’ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿತು. ಜೀ ಕನ್ನಡ ಸರಿಗಮಪ ಖ್ಯಾತಿಯ ಚಂದನ್ ಗುಪ್ತ ಡಾ.ರಾಜಕುಮಾರ್ ಅವರ ‘ನನ್ನ ನೀ ಗೆಲ್ಲಲಾರೆ’ ಗೀತೆಯೊಂದಿಗೆ ಪ್ರದರ್ಶನ ಆರಂಭಿಸಿದರು.

ನಂತರ ಭಜರಂಗಿ ಚಿತ್ರದ ‘ನಮ್ಮೂರು ಕಾಯೋ ದೊರೆಯೇ’ ಗೀತೆ, ಹಿಂದಿಯ ಭಾಗ್ ಮಿಲ್ಖಾ ಭಾಗ್ ಚಿತ್ರದ ‘ಜಿಂದಾ ಹೈ ತೋ’, ಬಾಹುಬಲಿ ಚಿತ್ರದ ‘ ಕೌನ್ ಹೇ ಹೈ’ ಗೀತೆಗಳನ್ನು ತಾರಕ ಸ್ವರದಲ್ಲಿ ಪ್ರಸ್ತುತ ಪಡಿಸಿದರು. ವಿದ್ಯುತ್ ಗಿಟಾರ್ ವಾದನದಲ್ಲಿ ಸ್ಟೀಫನ್, ಚಂದನ್ ಶ್ರೀವತ್ಸ, ಇಮ್ಯಾನುಯಲ್ ಡ್ರಮ್ಸ್, ಚೇತನ್ ಕೀಬೋರ್ಡ್‌ನಲ್ಲಿ ಸಾಥ್ ನೀಡಿದರು.

ವಿಜಯನಗರ ವೈಭವ ಅನಾವರಣ: ಬೆಂಗಳೂರಿನ ನೃತ್ಯ ಕಲಾವಿದರು ಪ್ರಸ್ತುತಪಡಿಸಿದ ವಿಜಯನಗರ ಆಡಳಿತ ವೈಭವದ ನೃತ್ಯ ರೂಪಕ ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ನೆರೆದವರಿಗೆ ಶ್ರೀಕೃಷ್ಣದೇವರಾಯನ ಆಡಳಿತ ಅನಾವರಣಗೊಳಿಸಿತು.

ಮಹಿಳಾ ಸಬಲೀಕರಣ, ದೇವದಾಸಿ, ನರ್ತಕಿ ಮದುವೆ ಆಗುವ ಮೂಲಕ ಸ್ತ್ರೀಗೆ ಸಮಾನ ಸ್ಥಾನಮಾನ, ಗೌರವಗಳನ್ನು ನೀಡಿದ ರಾಜ, ವೈಭಯುತ ಆಡಳಿತ ಜತೆಗಾರರ ಸಂಚಿನಿಂದ ಕೊನೆಯಾದ ಘಟನೆಗಳನ್ನು ಕಲಾವಿದರು ಮನಮುಟ್ಟುವಂತೆ ಅಭಿನಯಿಸಿ ತೋರಿಸಿದರು. ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಪ್ರದರ್ಶನ ನೆರೆದವರ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿತು.

ಧರೆಗಿಳಿದ ನವ ದುರ್ಗೆಯರು

ದಾವಣಗೆರೆಯ ನೂಪುರ್ ಕಲಾ ಸಂಸ್ಥೆ ಕಲಾವಿದರು ದಸರಾ ಉತ್ಸವ ನೆನಪಿಸುವಂತೆ ನವರಾತ್ರಿ ವೈಭವ ಪ್ರದರ್ಶಿಸಿದರು. ನವ ದುರ್ಗೆಯರು ನವ ಬಣ್ಣದ ಸೀರೆಯನುಟ್ಟು ಭಕ್ತಿ ಮೆರೆವಂತೆ ದೈವ ನೃತ್ಯ ಪ್ರದರ್ಶಿಸಿದರು. ಮೈಸೂರು ದಸರಾ ಮೂಲ ವಿಜಯನಗರವಾಗಿದ್ದು, ಅದನ್ನು ಪ್ರತಿಬಿಂಬಿಸುವಂತೆ ನವದುರ್ಗೆಯರ ನೃತ್ಯ ರೂಪಿಸಲಾಯಿತು.