ಹಂಪಿ (ಗಾಯತ್ರಿ ಪೀಠ ವೇದಿಕೆ):
ವೈಭವದ ಹಂಪಿ ಉತ್ಸವಕ್ಕೆ ಎರಡನೇ ದಿನ ಶನಿವಾರ ಜನಸಾಗರವೇ ಹರಿದು ಬಂತು. ಸಂಜೆಯಿಂದ ತಡರಾತ್ರಿವರೆಗೆ ನಡೆದ ಹಾಡು, ನೃತ್ಯ, ರಾಮಾಯಣ ಬಯಲಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.
ಎರಡನೇ ದಿನದ ವೇದಿಕೆ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಖಾನ್ ಉದ್ಘಾಟಿಸಿ ಮಾತಾಡಿದರು. ದರ್ಶನ್ ಅವರು ಹಂಪಿ ಉತ್ಸವಕ್ಕೆ ಬರುವಂತೆ ಕೇಳಿದ ತಕ್ಷಣ ಒಪ್ಪಿಕೊಂಡರು. ತಮ್ಮದೇ ಖರ್ಚಿನಲ್ಲಿ ಇಲ್ಲಿಗೆ ಬಂದಿದ್ದಾರೆ. ಕಾಟೇರಾ ಸಿನಿಮಾ ಅದ್ಭುತವಾಗಿದೆ. ನಾನು ಚಿತ್ರಮಂದಿರದಲ್ಲಿ ನೋಡಿರುವೆ. ನೋಡದವರು ಹೋಗಿ ನೋಡಿ. ಚಿತ್ರದ ಕಥೆ ಬರೆದಿದ್ದು ಕಂಪ್ಲಿಯ ಜಡೇಶ್. ಚಿತ್ರ ಯಶ ಕಂಡ ಬಳಿಕ ತಮ್ಮೂರಲ್ಲಿ ದೇವಾಲಯ ನಿರ್ಮಿಸಿ ಜನರಿಗೆ ಊಟ ಹಾಕಿದ್ದಾರೆ ಎಂದರು.
ಚಿತ್ರನಟ ದರ್ಶನ್ ಮಾತನಾಡಿ, ನಾನು 2018ರಲ್ಲಿ ಮೊದಲು ಸಲ ಬಂದಿದ್ದೆ. ಐದು ವರ್ಷದ ನಂತರ ಮತ್ತೆ ಬಂದಿರುವೆ. ನಿಮ್ಮನ್ನೆಲ್ಲ ಕಂಡು ಸಂತಸವಾಗಿದೆ. ಕೃಷ್ಣದೇವರಾಯರು ಆಳಿದ ನಾಡಿದು. ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕರಂಥವರು ನಾಡು, ನುಡಿಗಾಗಿ ಹೋರಾಡಿ ಮಡಿದವರು. ಅವರ ಆತ್ಮಗಳು ಇಲ್ಲೇ ಇರುತ್ತವೆ. ಅವರು ಕಟ್ಟಿದ ನಾಡನ್ನು ನೋಡುತ್ತಿರುತ್ತಾರೆ ಎಂದರು.
ನಾಡಿನಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಒಂದೊಂದು ಸಂಭ್ರಮ, ಇತಿಹಾಸ ಇರುತ್ತದೆ. ಸಚಿವ ಜಮೀರ್ ಖಾನ್ ಅವರ ಒತ್ತಾಸೆಯಂತೆ ಬಂದಿರುವೆ. ನಮ್ಮದು ನಾಟಕೀಯ ವ್ಯಕ್ತಿತ್ವ ಅಲ್ಲ. ನಮಗೆ ಆಗದವರು ಕರೆದರೆ ನಾನು ಹೋಗಲ್ಲ. ನಾನು ಹಲವರಿಗೆ ಚುನಾವಣೆ ಪ್ರಚಾರ ಮಾಡಿರುವೆ. ಅವರು ನಮ್ಮನ್ನು ತಿರುಗಿ ನೋಡಿಲ್ಲ. ಆದರೆ, ಒಂದು ದಿನವೂ ಜಮೀರ್ ಅವರು ರಾಜಕೀಯ ಕಾರಣಕ್ಕೆ ನನ್ನನ್ನು ಬಳಸಿಕೊಂಡಿಲ್ಲ ಎಂದು ಜಮೀರ್ ಖಾನ್ ಅವರನ್ನು ಪ್ರಶಂಸಿಸಿದರು.
ನಾನು ನನ್ನ ತಂದೆ ಶ್ರಾದ್ಧದ ದಿನ ಯಾರೇ ಕರೆದರೂ ಎಲ್ಲೂ ಹೋಗಲ್ಲ. ಆದರೆ, ಜಮೀರ್ ಅವರು ಕರೆದರೆ ಅವತ್ತಿನ ದಿನ ಸಹ ಹೋಗುವೆ. ಅವರು ತಮಗಾಗಿ ಯಾವತ್ತೂ ಕರೆಯಲ್ಲ. ಸಾಕಷ್ಟು ದಾನ ಮಾಡುತ್ತಾರೆ. ಆದರೆ, ಎಲ್ಲೂ ಹೇಳಿಕೊಳ್ಳುವುದಿಲ್ಲ. ನಮ್ಮಂಥ ಕನ್ನಡ ಕಲಾವಿದರು, ಚಿಕ್ಕ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿ ಎಂದು ಮನವಿ ಮಾಡಿದರು.
ಶಾಸಕರಾದ ಎಚ್.ಆರ್.ಗವಿಯಪ್ಪ, ಜೆ.ಎನ್.ಗಣೇಶ್, ಲತಾ ಮಲ್ಲಿಕಾರ್ಜುನ, ಕೃಷ್ಣ ನಾಯ್ಕ, ರಾಘವೇಂದ್ರ ಹಿಟ್ನಾಳ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಪಾಷಾ, ಡಿಸಿ ಎಂ.ಎಸ್.ದಿವಾಕರ, ಜಿಪಂ ಸಿಇಒ ಸದಾಶಿವ ಪ್ರಭು ಇತರರಿದ್ದರು.
ಸಂಗೀತ ನಿರ್ದೇಶಕ, ಹಾಸ್ಯನಟ ಸಾಧು ಕೋಕಿಲ ಅವರು ದರ್ಶನ್‌ಗಾಗಿ ‘ನೀ ನನ್ಹಟ್ಟಿ ಬೆಳಕಿದ್ಹಂಗೆ ನಂಜಿ, ಮಾಗಿಲ್ ಹುಲ್ಮೇಲೆ ಮಲಗಿದ್ದಂಗೆ ನಂಜಿ’ ಹಾಡು ಹಾಡಿ ರಂಜಿಸಿದರು. ಜನರು ಮೊಬೈಲ್ ಟಾರ್ಚ್ ಆನ್ ಮಾಡಿ ತಾಳ ಹಾಕಿದರು. ನಂತರ ದರ್ಶನ್ ‘ ಮಚ್ಚು ಕೆಂಪಾಗೋದು ಎರಡು ಸಲ. ಒಂದು ಕಾದಾಗ..’ ಡೈಲಾಗ್ ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಡೆದ ರಾಮಾಯಣ ಬಯಲಾಟ ಪ್ರದರ್ಶನ ಹಂಪಿ ಇತಿಹಾಸದೊಂದಿಗೆ ರಾಮಾಯಣದ ಬೆಸುಗೆ ಮರು ನೆನಪಿಸಿತು. ಕೋಲ್ಕತ ಗೋಲ್ಡನ್ ಗರ್ಲ್ಸ್ ತಂಡದವರು ನಡೆಸಿಕೊಟ್ಟ ಜೈ ಗಣೇಶ ನೃತ್ಯ ರೂಪಕ ಜನರ ಕಣ್ಣುತಂಪು ಮಾಡಿತು. ತಮ್ಮ ಉಡುಗೆಯಲ್ಲಿಯೇ ಗಣೇಶ, ಶಂಖ, ಸ್ವಸ್ತಿಕ್ ಚಿಹ್ನೆಗಳನ್ನು ಪ್ರದರ್ಶಿಸಿ ಬೆರಗು ಮೂಡಿಸಿದರು.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಖಾನ್ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹಾಡಿದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗೊಂಬೆ ಹೇಳುತೈತೆ.. ಹಾಡಿಗೆ ಧ್ವನಿಯಾದರು. ನಟ ಪುನೀತ್ ರಾಜಕುಮಾರ್ ಹಾಡು ಬರುತ್ತಲೇ ಅಭಿಮಾನಿಗಳು ಹಾಡು ಹಾಡಿ, ಮೊಬೈಲ್ ಟಾರ್ಚ್ ಆನ್ ಮಾಡಿ ಗೌರವ ಸಲ್ಲಿಸಿದರು.
ನಟ ದರ್ಶನ್ ಆಗಮನ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಗಾಯತ್ರಿ ಪೀಠ ಮುಖ್ಯವೇದಿಕೆಯಲ್ಲಿ ಹೆಚ್ಚಿನ ಪೊಲೀಸ್, ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿದ್ದು ಕಂಡುಬಂತು. ಮೊದಲ ದಿನ ರಾತ್ರಿ ಕಾರ್ಯಕ್ರಮದಲ್ಲಿ ಹಿಂದಿನಿಂದ ಕೆಲವರು ನೀರಿನ ಬಾಟಲ್ ಎಸೆದಿದ್ದರು. ಈ ಹಿಂದೆ ದರ್ಶನ್ ಚಿತ್ರದ ಪ್ರಮೋಷನ್‌ಗೆ ಹೊಸಪೇಟೆಗೆ ಬಂದಾಗ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದರು. ಹೀಗಾಗಿ ಈ ಬಾರಿ ಕಟ್ಟೆಚ್ಚರವಹಿಸಲಾಗಿತ್ತು.
ಹಂಪಿ ಉತ್ಸವಕ್ಕೆ ಎರಡನೇ ದಿನ ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು. ಕಡ್ಡಿರಾಂಪುರದಿಂದ ಹಂಪಿವರೆಗೂ ಸಂಚಾರ ದಟ್ಟಣೆ ಕಂಡುಬಂತು. ಕಡ್ಡಿರಾಂಪುರ ಬಳಿ ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ, ಕಾಕುಬಾಳು ಗ್ರಾಮದ ಸಂತೋಷ್ (22) ಮೃತಪಟ್ಟಿದ್ದಾರೆ.
ಗುಂಡು ಎತ್ತುವ ರಾಜ್ಯ ಮಟ್ಟದ ಸ್ಪರ್ಧೆಯೂ ಜನಾಕರ್ಷಣೆ ಕೇಂದ್ರಬಿಂದುವಾಗಿತ್ತು. ಈ ಆಟ ನೋಡಲು ಗ್ರಾಮೀಣ ಪ್ರದೇಶದ ನೂರಾರು ಯುವಕರು ಧಾವಿಸಿದ್ದು ವಿಶೇಷ. ವಿಜಯನಗರ, ಬಾಗಲಕೋಟೆ, ವಿಜಯಪುರ, ಗೋಕಾಕ್ ಸೇರಿ ವಿವಿಧ ಜಿಲ್ಲೆಗಳ 9 ಜನರು ನೋಂದಣಿ ಮಾಡಿಸಿದ್ದು, 7 ಜನ ಭಾಗವಹಿಸಿದ್ದರು. 135, 155, 175 ಕೆಜಿ ತೂಕದ ಗುಂಡುಗಳಿದ್ದವು. ಹಿಂದಿನ ವರ್ಷದ ಉತ್ಸವದಲ್ಲಿ ಇಬ್ರಾಹಿಂ ಸಾಬ್ 150 ಕೆಜಿ ತೂಕದ ಗುಂಡನ್ನು ಕೇವಲ 3.10 ನಿಮಿಷದಲ್ಲಿ ಎತ್ತಿ ಬಿಸಾಕಿದ್ದರು. ಈ ಬಾರಿ 155 ಕೆ.ಜಿ ತೂಕದ ಗುಂಡು ಎತ್ತುವ ಮೂಲಕ ವಿಜಯಪುರದ ಶೇಖಪ್ಪ (ಪ್ರಥಮ), ಮರಿಯಮ್ಮನಹಳ್ಳಿ ಗಂಗಾಧರ (ದ್ವಿತೀಯ) ಹಾಗೂ ಹೊಸಪೇಟೆ ಶೀಗೇನಹಳ್ಳಿ ಚಂದ್ರಪ್ಪ (ತೃತೀಯ) ಸ್ಥಾನಗಳಿಸಿದರು. ಕ್ರಮವಾಗಿ 10, 5 ಹಾಗೂ 3 ಸಾವಿರ ರೂ. ಬಹುಮಾನ ನೀಡಲಾಯಿತು. ಶಾಸಕ ಗವಿಯಪ್ಪ ವೈಯಕ್ತಿಕವಾಗಿ ಕ್ರಮವಾಗಿ 20, 10, 5 ಸಾವಿರ ರೂ. ನೀಡಿದರು.