ಮಂಜುನಾಥ ಅಯ್ಯಸ್ವಾಮಿ ಹಂಪಿ
ಉತ್ಸವದ ಹಿನ್ನೆಲೆಯಲ್ಲಿ ಜನಾಕರ್ಷಣೆ ಹಾಗೂ ಆಗಸದಿಂದ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುವ ಹಂಪಿ ಬೈಸ್ಕೈಗೆ ಈ ಬಾರಿಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಂಪಿಯಲ್ಲಿ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆಯಾದರೂ ಅಧಿಕೃತವಾಗಿ ಉತ್ಸವದ ಮೊದಲ ದಿನ ಚಾಲನೆ ಸಿಗಬೇಕಿತ್ತು. ಆದರೆ, ಹೆಲಿಕಾಪ್ಟರ್ ಬರುವುದು ವಿಳಂಬವಾಗಿ ಚಾಲನೆ ಸಿಗಲಿಲ್ಲ. ಚಾಲನೆ ಸಿಗದಿದ್ದರೂ ಶುಕ್ರವಾರ ಮಧ್ಯಾಹ್ನದಿಂದಲೇ ಹಾರಾಟ ಶುರು ಮಾಡಿದವು. ಎರಡು ದಿನಗಳ ಕಾಲ ಪ್ರಯಾಣಿಕರನ್ನು ಹೊತ್ತು ಬೆರಳೆಣಿಕೆ ಸುತ್ತುಗಳನ್ನು ಹೊಡೆದವು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಜನಮನ ಸೂರೆಗೊಂಡ ಸಾಂಸ್ಕೃತಿಕ ಸಂಭ್ರಮ
ಆಗಸದಿಂದ ಹಂಪಿ ಕಣ್ತುಂಬಿಕೊಂಡವರು ಹರ್ಷವೇನೋ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಯೋಜನೆ ಯಶಸ್ವಿಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ಇದು ಕಂಪನಿ ಮಾಲೀಕರನ್ನು ಚಿಂತೆಗೀಡು ಮಾಡಿದೆ. ಮೊದಲ ದಿನ ಒಂದು ಹೆಲಿಕಾಪ್ಟರ್ ಹಾಗೂ ಎರಡನೇ ದಿನ ಕೆವಲ ಎರಡು ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದೆ.
2023ರ ಹಂಪಿ ಉತ್ಸವದಲ್ಲಿ ಇಬ್ಬರಿಗೆ 2500 ರೂ.ಗಳನ್ನು ಬೆಲೆ ನಿಗದಿಪಡಿಸಿ ಪ್ಯಾಕೇಜ್ ನೀಡಲಾಗುತ್ತಿತ್ತು. ಆಗ ಆಗಸದಿಂದ ಹಂಪಿ ನೋಡಲು ಆಸಕ್ತಿವಹಿಸಿದ್ದ ಹಲವರು ಹೆಲಿಕಾಪ್ಟರ್‌ಗಳಲ್ಲಿ ಕೂತು ಸಂಭ್ರಮಿಸಿದ್ದರು. ಪರಿಣಾಮ ಜನರ ಬೇಡಿಕೆ ಗಮನಿಸಿ ಒಂದೆರಡು ದಿನ ವಿಸ್ತರಿಸಲಾಗುತ್ತಿತ್ತು.
ಕಳೆದ ಬಾರಿ ಒಬ್ಬರಿಗೆ ಏಳು ನಿಮಿಷ ಹಾರಾಟಕ್ಕೆ 3800 ರೂ., ಎಂಟು ನಿಮಿಷ ಹಾರಾಟಕ್ಕೆ 4300 ರೂ. ನಿಗದಿಪಡಿಸಲಾಗಿತ್ತು. ಈ ಬಾರಿ 3999 ರೂ. ನಿಗದಿ ಮಾಡಿದ್ದು, ಜನರಿಗೆ ಈ ಬೆಲೆ ದುಬಾರಿಯಾಗಿದೆ. ಹಾಗಾಗಿ ಲೋಹದ ಹಕ್ಕಿಗಳಲ್ಲಿ ಕೂಡಲು ಆಸಕ್ತಿ ವಹಿಸುತ್ತಿಲ್ಲ. ಹೇಗಾದರೂ ಮಾಡಿ ಹೆಲಿಕಾಪ್ಟರ್‌ಗಳಲ್ಲಿ ಕೂಡಬೇಕೆಂಬ ಆಸಕ್ತಿಯುಳ್ಳವರು ಕಂಪನಿಯವರ ಬಳಿ ಚೌಕಾಸಿ ಮಾಡುತ್ತಿದ್ದಾರೆ.
ಹಂಪಿ ಬೈಸ್ಕೈಗೆ ತಾಲೂಕಿನ ಕಮಲಾಪುರದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಚಾಲನೆ ನೀಡಿದ್ದಲ್ಲದೆ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸಿದರು. ಅದಕ್ಕೂ ಮುನ್ನ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಹಂಪಿಯ ಸ್ಮಾರಕಗಳನ್ನು ನೋಡುವುದು ಕಣ್ಣಿಗೆ ಹಬ್ಬ.
ಪ್ರವಾಸಿಗರು ನಡೆದುಕೊಂಡು ಹಂಪಿ ನೋಡುವುದು ಸಾಮಾನ್ಯ. ಆಗಸದಿಂದ ಈ ಸ್ಮಾರಕಗಳನ್ನು ನೋಡುವ ಅನುಭವವೇ ವಿಭಿನ್ನ. ಹೀಗಾಗಿ ಹಂಪಿ ಉತ್ಸವದ ಸಮಯದಲ್ಲಿ ಆಸಕ್ತ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಲಾಗುತ್ತಿದೆ. ಒಮ್ಮೆ ಹೆಲಿಕಾಪ್ಟರ್‌ನಲ್ಲಿ ಹೋಗಲು ಒಬ್ಬರಿಗೆ 3999 ರೂ. ಶುಲ್ಕ ನಿಗದಿಪಡಿಸಲಾಗಿದೆ. ಮಾ.4ರ ವರೆಗೆ ಈ ಸೇವೆ ಇರಲಿದೆ ಎಂದರು.