ಹಂಪಿ: ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಉದ್ದೇಶದಿಂದ ಆಯೋಜಿಸಿರುವ ಹಂಪಿ ಉತ್ಸವದ ಕೆಲ ವೇದಿಕೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮುಖ್ಯ ವೇದಿಕೆಯಲ್ಲೇ ಪ್ರಮುಖ ಕಲಾವಿದರ ಕಾರ್ಯಕ್ರಮ ಆಯೋಜಿಸುವುದರಿಂದ ಇತರ ವೇದಿಕೆಗಳಲ್ಲಿ ಕುರ್ಚಿಗಳು ಖಾಲಿ ಇದ್ದವು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಕಂಗೊಳಿಸಿದ ವಿಜಯನಗರ ಗತವೈಭವ
ಎಲ್ಲ ವೇದಿಕೆಗಳಿಗೆ ಒಂದೇ ರೀತಿಯ ಪ್ರಾಮುಖ್ಯ ನೀಡಬೇಕೆಂಬ ಒತ್ತಾಯ ಕೇಳಿಬಂದರೂ ಕಡೆಗಣಿಸಿದ್ದರಿಂದ ಕೆಲ ವೇದಿಕೆಗಳಲ್ಲಿ ಪ್ರೇಕ್ಷಕರೇ ಇಲ್ಲದೆ ಕಾರ್ಯಕ್ರಮ ನಡೆದವು. ಕಲಾವಿದರು ಅನಿವಾರ್ಯ ಎನ್ನುವಂತೆ ಕಾರ್ಯಕ್ರಮ ನಡೆಸಿಕೊಟ್ಟರು.
ಸೂರ್ಯಾಸ್ತ ಸಮೀಪಿಸುತ್ತಿದ್ದಂತೆ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವಂತಹ ಕಾರ್ಯಕ್ರಮಗಳು ಮುಖ್ಯ ವೇದಿಕೆಯಲ್ಲಿ ಚಾಲನೆ ಪಡೆದವು. ಆದರೆ ಎದುರು ಬಸವಣ್ಣ, ವಿರೂಪಾಕ್ಷೇಶ್ವರ ದೇವಸ್ಥಾನ, ಸಾಸಿವೆಕಾಳು ಗಣಪತಿ ಹಾಗೂ ಮಹಾ ನವಮಿ ದಿಬ್ಬ ವೇದಿಕೆಯಲ್ಲಿ ಜನರು ಇಲ್ಲದೆ ಕೇವಲ ಕಲಾವಿದರ ಕುಟುಂಬಸ್ಥರು ಪ್ರೇಕ್ಷಕರಾಗಿ ಕುಳಿತು ಫೋಟೊಗಳನ್ನು ಕ್ಲಿಕ್ಕಿಸಿದರು.
ಎದುರು ಬಸವಣ್ಣ ವೇದಿಕೆಯಲ್ಲಿ ಹೊಸಪೇಟೆಯ ಬುಡ್ಗ ಜಂಗಮ ಹಗಲು ವೇಷ ಕಲಾವಿದರ ಹನುಮಾಯಣ, ಬಳ್ಳಾರಿಯ ಡಾ.ಕೆ.ರಾಮಕಿರಣ್ ಮತ್ತು ಸೃಷ್ಟಿ ತಂಡದಿಂದ ವೀಣಾ ವಾದನ ಕಾರ್ಯಕ್ರಮ ನಡೆದವು.
ಜಾನಪದ ಗೀತ-ಗಾಯನ ಸಂಭ್ರಮ
ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಶುಕ್ರವಾರ ಸ್ಥಳೀಯ ಕಲಾವಿದರಿಂದ ಭಕ್ತಿ ಸಂಗೀತ, ತತ್ವಪದ ಗಾಯನ, ಸುಗಮ ಸಂಗೀತ, ಭಜನೆ, ಜಾನಪದ ಗಾಯನ ಸೇರಿದಂತೆ ಹಲವು ಕಾರ್ಯಕ್ರಮ ನಡೆದವು. ಮರಿಯಮ್ಮನಹಳ್ಳಿಯ ಅಣಮಯ್ಯ ಮತ್ತು ತಂಡದವರಿಂದ ಕೇಳೋ ಜಾಣ ಶಿವಜ್ಞಾನ ಮಾಡಣ್ಣ, ನಿನ್ನೊಳಗ ನೀನು ತಿಳಿದು ನೋಡಣ್ಣ, ಉತ್ತುಂಗ ನಾಡಿನಿಂದ ಒಂದು ಹುಡುಗಿ ಬಂದಾಳವ್ವ, ತರವಲ್ಲ ತಗಿ ನಿನ್ನ ತಂಬೂರಿ ಹೀಗೆ ಹಲವು ಜಾನಪದ ಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ಸಂಗೀತದ ರಸದೌತಣ ಉಣಬಡಿಸಿದರು.
ಹರಪನಹಳ್ಳಿಯ ಬಸವನಾಳು ಗ್ರಾಮದ ನೈಪುಣ್ಯ ಟ್ರಸ್ಟ್‌ನ ಕಲಾವಿದರಿಂದ ದ್ರೋಣಾಚಾರ್ಯ ಮತ್ತು ಏಕಲವ್ಯ ಬಿಲ್ವಿದ್ಯೆ ಕುರಿತ ಯಕ್ಷಗಾನ ನಾಟಕ ಪ್ರದರ್ಶಿಸಿದರು. ಕಲಾವಿದರಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.