ಹಂಪಿಯ ಉದ್ದಾನ ವೀರಭದ್ರ ದೇಗುಲದಿಂದ ಜಾನಪದ ವಾಹಿನಿಗೆ ಚಾಲನೆ ನೀಡಿದ ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ. ಉಪವಿಭಾಗಿಯಾಧಿಕಾರಿ ವಿವೇಕಾನಂದ, ಹೊಸಪೇಟೆ ಡಿವೈಎಸ್ಪಿ ಮಂಜುನಾಥ ಇತರರಿದ್ದರು.  
ಜಿಲ್ಲೆ

ಹಂಪಿ ಉತ್ಸವದಲ್ಲಿ ಜನಪದ ಲೋಕ ಅನಾವರಣ

ಶಶಿಧರ ಎಲ್

ವಿಜಯನಗರ ವೈಭವದ ನೆನಪು >> 45ಕ್ಕೂ ಹೆಚ್ಚಿನ ಕಲಾತಂಡಗಳು ಭಾಗಿ >> ಕಣ್ಣು ತುಂಬಿಕೊಂಡ ಕಲಾಸಕ್ತರು

ಮಂಜುನಾಥ ಅಯ್ಯಸ್ವಾಮಿ ಹಂಪಿ

ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವದಲ್ಲಿ ಜನಪದ ವಾಹಿನಿಯ ಜಾನಪದ ಲೋಕ ಭಾನುವಾರ ಅನಾವರಣಗೊಂಡಿತು.

ಉದ್ದಾನ ವೀರಭದ್ರೇಶ್ವರ ದೇಗುಲದಿಂದ ಆರಂಭವಾದ ಜಾನಪದ ವಾಹಿನಿ ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಕಲಾವಿದರು ಹೆಜ್ಜೆ ಹಾಕಿದರು. ರಾಜಗಾಂಭಿರ್ಯದಿಂದ ಗಜರಾಜ ಮುಂದೆ ಹೆಜ್ಜೆ ಹಾಕಿದರೆ, ಅಲಕೃಂತ ಮಂಟಪದಲ್ಲಿ ತಾಯಿ ಭುವನೇಶ್ವರಿ ಉತ್ಸವ ಮೂರ್ತಿ ಹಿಂದೆ ಸಾಗಿತು, ರಸ್ತೆಯುದ್ದಕ್ಕೂ ನಿಂತಿದ್ದ ಜನ ಕೈ ಮುಗಿದು ಭಕ್ತಿ ಸಮರ್ಪಿಸಿದರು.

ವಿರೂಪಾಕ್ಷೇಶ್ವರ ದೇವಸ್ಥಾನ ಸಂಪರ್ಕಿಸುವ ದಾರಿಯಲ್ಲಿ ಜಾನಪದ ವೈಭವ ವೀಕ್ಷಿಸಿದ ಜನರು. (ಚಿತ್ರ: ನಾಗರೆಡ್ಡಿ ಹಡಗಲಿ)

ರವಿ ಆಗಸದಲ್ಲಿ ಮರೆಯಾಗುತ್ತಿದ್ದರೆ, ಇತ್ತ ಜಾನಪದ ಕಲಾವಿದರು ಮೈಮರೆತು ರಸ್ತೆಯುದ್ದಕ್ಕೂ ಹೆಜ್ಜೆ ಹಾಕುತ್ತಿದ್ದರು. ಅವರ ಕಲೆ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಕಲಾವಿದರನ್ನು ಹುರಿದುಂಬಿಸಿ ಹುಮ್ಮಸ್ಸು ತುಂಬಿದರು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಹೊಸಪೇಟೆ ಕಲಾವಿದರಿಂದ ಹಂಪಿ ಉತ್ಸವದ ಲೋಗೋ ಪ್ರದರ್ಶನ.

ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ 45 ಕ್ಕೂ ಹೆಚ್ಚು ವಿವಿಧ ಕಲಾಪ್ರಕಾರಗಳ ಜಾನಪದ ತಂಡಗಳು, ಹಂಪಿಯ ಮುಖ್ಯ ಬೀದಿಯಲ್ಲಿ ತಮ್ಮ ಕಲಾಪ್ರತಿಭೆ ಮೆರೆಯುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಿದವು.

ರಾಮಾಯಣ ಹಗಲು ವೇಷಧಾರಿಗಳ ಕಲೆ ಪ್ರದರ್ಶನ.

ನಾಡಿನ ನಾನಾ ಭಾಗಗಳ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಸಾರುವ ಜನಪದ ಕಲಾ ಪ್ರಕಾರಗಳ ಮೆರವಣಿಗೆ ಕೃಷ್ಣ ದೇಗುಲ, ಸಾಸುವೆಕಾಳು ಗಣಪತಿ, ಕಡಲೆಕಾಳು ಗಣಪತಿ ಮಾರ್ಗವಾಗಿ ವಿರೂಪಾಕ್ಷೇಶ್ವರ ದೇಗುಲದ ರಥಬೀದಿವರೆಗೆ ನಡೆಯಿತು. ಮೆರವಣಿಗೆಯಲ್ಲಿ ಜಾನಪದ ಕಲಾವಿದರು ಹೊಸ ಲೋಕವನ್ನೇ ಸೃಷ್ಟಿಸಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದ ವೈಭವ ನೆನಪಿಸಿತು.

ರಾಮನಗರ ಜಿಲ್ಲೆಯ ಜೈ ಶ್ರೀರಾಮ್ ಮಹಿಳಾ ಚಂಡೆ ವಾದ್ಯ ಬಳಗದ ಕಲೆ ಪ್ರದರ್ಶನ.

ರಾಮನಗರದ ಜೈಶ್ರೀರಾಮ ಮಹಿಳಾ ಚಂಡೆ ವಾದ್ಯ ಬಳಗದಿಂದ ಚಂಡೆ ವಾದ್ಯ, ನಾಗರಾಜ್ ಮತ್ತು ತಂಡದಿಂದ ಪೂಜಾ ಕುಣಿತಾ, ಹೂವಿನ ಹಡಗಲಿಯ ಜ್ಯೋತಿ ತಂಡದಿಂದ ಲಂಬಾಡಿ ಡ್ಯಾನ್ಸ್ ಹಾಗೂ ಹರಪನಹಳ್ಳಿ ಮೋತಿ ಮಾರುತಿ ತಂಡದಿಂದ ಹಗಲುವೇಶ ಗೊಂಬೆ ದಿರಿಸಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅವರನ್ನು ಕುತೂಹಲದಿಂದ ಜನ ನೋಡುತ್ತಿದ್ದರು ಮತ್ತು ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಉಡುಪಿ ಕಲಾವಿದರಿಂದ ಚಂಡಿ ಕುಣಿತ.

ಅಮ್ಮ ಅಲ್ನೋಡು.. ಗೊಂಬೆ.. ಎಂದು ಮಕ್ಕಳು ಅಮ್ಮನಿಗೆ ಹೇಳುತ್ತಿದ್ದರು. ವಿದೇಶಿಯರೂ ಇದರಿಂದ ಹೊರತಾಗಿರಲಿಲ್ಲ. ವ್ಹಾವ್ ವಾಟ್ ಎ ಕಾಸ್ಟೂಮ್ ಎಂದು ಲಂಬಾಣಿಗರ ಉಡುಪನ್ನು ಮೆಚ್ಚಿದರು. ಕೊಟ್ಟೂರಿನ ವೀರಭದ್ರೇಶ್ವರ ವಾದ್ಯವೃಂದದ ನಂದಿ ಕೋಲು, ಸಂಡೂರಿನ ತಾರನಗರದ ಚಂದ್ರೇಯಸ್ವಾಮಿ ಕಲತಂಡದಿಂದ ವೀರಗಾಸೆ ಕುಣಿತ.

ತುಮಕುರಿನ ಕಲಾವಿದರ ಗೊಂಬೆ ವೇಶಗಳ ಪ್ರದರ್ಶನ.

ರಾಮಸಾಗರ ಕಲಾವಿದರಿಂದ ಕಹಳೆ ವಾದನ, ಮಂಡ್ಯದ ಚನ್ನಪಟ್ಟಣ ತಂಡದಿಮದ ಸೋಬಾನ ಕುಣಿತ, ಉಡುಪಿಯ ರುದ್ರತಾಂಡವಾಂ ತಂಡದಿಂದ ಚಂಡೆ, ನಾಗಮಂಗಲದ ಕಲಾವಿದರಿಂದ ನಗಾರಿ ವಾದನ.

ಕಲಬುರಗಿಯ ಕಲಾವಿದರಿಂದ ಲಂಬಾಣಿ ನೃತ್ಯ.

ಶಿವಮೊಗ್ಗ ಸಾಗರದ ನೀಲಕಂಠೇಶ್ವರ ಮಹಿಳಾತಂಡದಿಂದ ಡೊಳ್ಳು ಕುಣಿತ, ಚಾಮರಾಜನಗರ ಪರಮೇಶ್ವರ ಕಲಾತಂಡಿಂದ ಗೊರವರ ಕುಣಿತ, ಚಳ್ಳಕೆರೆ ಕಲಾವಿದರಿಂದ ನವಿಲು ಕುಣಿತ.

ಹೊಸಪೇಟೆ ತಾಲೂಕಿನ ಮಲಪನಗುಡಿಯ ಪುಟಾಣಿ ಕಲಾವಿದರಿಂದ ಡೋಲು ಕುಣಿತ.

ತುಮಕೂರಿನ ಗೊಂಬೆ ಕುಣಿತ ಮೆರವಣಿಗೆಯುದ್ದಕ್ಕೂ ಎಲ್ಲರ ಗಮನ ಸೆಳೆಯಿತು. ಅವರ ಕಲೆ ನೋಡಿ ಜನ ಬೆರಗಾದರು. ಭಾನುವಾರ ರಜಾ ದಿನ ಹಾಗೂ ಹಂಪಿ ಉತ್ಸವದ ಕೊನೆಯ ದಿನವಾಗಿದ್ದರಿಂದ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಡೆಗಳಿಂದ ಅಪಾರ ಜನ ಬಂದಿದ್ದರು.

ಹಗರಿಬೊಮ್ಮನಹಳ್ಳಿ ಕಲಾವಿದರ ಸುಡುಗಾಡ ಸಿದ್ದರ ಕಲೆ ಪ್ರದರ್ಶನ.

ಮೆರವಣಿಗೆ ಹಾದು ಹೋಗುವ ರಸ್ತೆಯುದ್ದಕ್ಕೂ ನಿಂತು ಮೆರವಣಿಗೆ ಕಣ್ತುಂಬಿಕೊಂಡರು. ಮೂರು ದಿನಗಳ ಉತ್ಸವದ ಅವಧಿಯಲ್ಲಿ ಭಾನುವಾರ ಜಾತ್ರೆಯ ವಾತಾವರಣ ಕಂಡು ಬಂತು.

ಸಂಡೂರಿನ ತಾರನಗರದ ಚಂದ್ರೇಯಸ್ವಾಮಿ ಕಲತಂಡದಿಂದ ವೀರಗಾಸೆ ಕುಣಿತ.