ಹಂಪಿ (ವಿಜಯನಗರ): ಹಂಪಿ ಉತ್ಸವ ಅಂಗವಾಗಿ ಕಮಲಾಪುರದಲ್ಲಿ ಮೊದಲ ದಿನ ಶುಕ್ರವಾರ ಏರ್ಪಡಿಸಿದ್ದ ಎತ್ತುಗಳ ಪ್ರದರ್ಶನಕ್ಕೆ ವಿವಿಧೆಡೆಯಿಂದ ಆಗಮಿಸಿದ ಎತ್ತುಗಳು ಗಮನ ಸೆಳೆದವು.
ಪಶುಪಾಲನಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರದರ್ಶನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 15 ಜೋಡೆತ್ತುಗಳು ಆಗಮಿಸಿದ್ದವು. ಕಳೆದ ಬಾರಿ 47 ಜೋಡಿ ಆಗಮಿಸಿದ್ದರೆ, ಈ ಬಾರಿ ಕಡಿಮೆ ಸಂಖ್ಯೆಯ ಎತ್ತುಗಳನ್ನು ಕರೆತರಲಾಗಿತ್ತು. ಹೊಸಪೇಟೆ, ಮಲಪನಗುಡಿ, ನಾಗೇನಹಳ್ಳಿ ಸೇರಿ ವಿವಿಧ ಗ್ರಾಮದಿಂದ ರೈತರು ಎತ್ತುಗಳ ಜತೆ ಆಗಮಿಸಿದ್ದರು. ಕಿಲಾರಿ, ಹಳ್ಳಿಕಾರ್, ಮಲೆನಾಡು ಗಿಡ್ಡ, ಹೊಂಗೋಲ್ ತಳಿಗಳ ಎತ್ತುಗಳು ಮಾತ್ರ ಬಂದಿದ್ದವು.
ಕೃಷಿ ಚಟುವಟಿಕೆ ಮುಗಿಯದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಎತ್ತುಗಳು ಬಂದಿಲ್ಲವೆಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಮಧ್ಯಾಹ್ನವಾದರೂ ಜನರೂ ಅಷ್ಟಾಗಿ ಆಗಮಿಸದ ಕಾರಣ ಸಚಿವ ಜಮೀರ್ ಖಾನ್ ಇದ್ದ ಎತ್ತುಗಳನ್ನು ವೀಕ್ಷಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಮಾಲೀಕರಿಂದ ಎತ್ತುಗಳ ವಿಶೇಷತೆ ಬಗ್ಗೆ ಕೇಳಿ ತಿಳಿದರು.
ಮೂರಡಿ ಇರುವ ಮಲೆನಾಡು ಗಿಡ್ಡ, ವಿಶಿಷ್ಟ ದೇಹ ರಚನೆ ಹೊಂದಿರುವ ಆಂಧ್ರದ ಭೀಮ ಖ್ಯಾತಿಯ ಹೊಂಗಲ್ ತಳಿ ಎತ್ತು, ದೇಸಿ ತಳಿ ಎಂದು ಬಿಂಬಿತವಾದ ಹಳ್ಳಿಕಾರ್ ತಳಿ ಜೋಡೆತ್ತುಗಳು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿದ್ದವು. ಆಕರ್ಷಕ ಕೊಂಬು, ಮೈಕಟ್ಟು, ಕೋಲು ಮುಖ ಹೊಂದಿದ ಇವುಗಳು ಜನರನ್ನು ಆಕರ್ಷಿಸಿದವು. ಸಚಿವ ಜಮೀರ್ ಖಾನ್ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ಎತ್ತುಗಳಿಗೆ ತಲಾ 10 ಸಾವಿರ ರೂ. ಘೋಷಿಸಿದರು.
ಜತೆಗೆ ವಿಜೇತ ಜೋಡಿಗೆ ವೈಯಕ್ತಿಕವಾಗಿ 50 ಸಾವಿರ ರೂ. ನೀಡುವುದಾಗಿ ತಿಳಿಸಿದರು. ನೋಡುಗರು, ಅಧಿಕಾರಿಗಳು ಎತ್ತುಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಶಾಸಕ ಎಚ್.ಆರ್.ಗವಿಯಪ್ಪ, ಡಿಸಿ ಎಂ.ಎಸ್.ದಿವಾಕರ, ಪಶುಪಾನಲಾ ಇಲಾಖೆ ಅಧಿಕಾರಿಗಳಿದ್ದರು.
ಹಳ್ಳಿಕಾರ್ ತಳಿ ಚಾಂಪಿಯನ್
ಹೊಸಪೇಟೆ ರೈತ ಸುಲೇಮಾನ್. ಎ ಅವರ ಹಳ್ಳಿಕಾರ್ ತಳಿ ಜೋಡೆತ್ತು ಪ್ರಥಮ ಸ್ಥಾನ ಪಡೆದು ಎತ್ತುಗಳ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು. ಉತ್ಸವ ಸಮಿತಿಯಿಂದ 10 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಇನ್ನು ಸಚಿವ ಜಮೀರ್ ಅಹ್ಮದ್ ಖಾನ್ ವಿಜೇತ ಎತ್ತುಗಳಿಗೆ 50 ಸಾವಿರ ರೂ.ಘೋಷಿಸಿದ್ದು, ಪ್ರಥಮ ಸ್ಥಾನ ಪಡೆದ ಈ ಜೋಡಿ ಒಟ್ಟು 60 ಸಾವಿರ ರೂ. ಗಿಟ್ಟಿಸಿಕೊಂಡವು.
ಕಮಲಾಪುರದ 19 ನೇ ವಾರ್ಡ್ ರೈತರಾದ ಕೆ.ಸಿದ್ದಪ್ಪ ಅವರ ಎತ್ತುಗಳು (ದ್ವಿತೀಯ) 7,500 ನಗದು, ಪೂಜಾರಿ ಜೋಗಯ್ಯ ಅವರ ಎತ್ತುಗಳು ತೃತೀಯ ಸ್ಥಾನ ಪಡೆದು ಐದು ಸಾವಿರ ನಗದು ಹಾಗೂ ಪ್ರಮಾಣಪತ್ರ ಗಿಟ್ಟಿಸಿಕೊಂಡವು.
ಶಿವಮೊಗ್ಗ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಡಾ.ಸತೀಶ್ ಮತ್ತು ಡಾ.ವೀರಣ್ಣನವರ್ ತೀರ್ಪುಗಾರರಾಗಿ ಭಾಗವಹಿಸಿದರು. ಎಸ್ಪಿ ಶ್ರೀಹರಿಬಾಬು, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಪೋವರ್ ಸಿಂಗ್ ನಾಯಕ, ಸಹಾಯಕ ನಿರ್ದೇಶಕ ಅಕ್ತರ್ ಎಚ್.ಎಂ.ಎಸ್. ಇತರರಿದ್ದರು.