ಜಿಲ್ಲೆ

ಕವಿಗೋಷ್ಠಿಯಲ್ಲಿ ವೈಚಾರಿಕತೆಗೆ ಒತ್ತು ನೀಡಿದ ಕವಿಗಳು

ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಹಂಪಿ
ಮೌಢ್ಯತೆ, ಭ್ರಷ್ಟಾಚಾರ, ಭಯೋತ್ಪಾದನೆ ಇತ್ಯಾದಿ ಪ್ರಚಲಿತ ವಿದ್ಯಮಾನಗಳೇ ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ವಿಶೇಷ ಸ್ಥಾನ ಪಡೆದವು. ವಿಜಯಪುರದ ಜಂಬುನಾಥ ಕಾಂಚ್ಯಾಣಿ ಎತ್ತ ಸಾಗಿದೆ ನಮ್ಮ ಭಾರತದ ಬಂಡಿ ಕವನದ ಮೂಲಕ ಮೌಢ್ಯತೆ, ಭ್ರಷ್ಟಾಚಾರ, ಅತ್ಯಾಚಾರ, ಭಯೋತ್ಪಾದನೆ ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದರು. ಕೂಡ್ಲಿಗಿಯ ಪತ್ರಕರ್ತ ಭೀಮಣ್ಣ ಗಜಾಪುರ ಬದುಕು ಬಣ್ಣ ಕವನದ ಮೂಲಕ ಬದಲಾದ ಕಾಲಘಟ್ಟಕ್ಕೆ ಒತ್ತು ನೀಡಿದರು. ಹರಪನಹಳ್ಳಿಯ ನಾಗರಾಜ ಅವರ ಎದೆಗೆ ಬಿದ್ದ ಅಕ್ಷರವ ಹೊತ್ತು ಕವನದಲ್ಲಿ ಶಿಕ್ಷಣದ ಮಹತ್ವ ಸಾರಿದರು.

ದಾವಣಗೆರೆಯ ಗೀತಾ ತಲಗಿ ಕಾನೂನು ಹಾಗೂ ಆಡಳಿತ ವ್ಯವಸ್ಥೆಯ ಮತ್ತೊಂದು ಮುಖವಾಡ ಕಳಚುವ ಪ್ರಯತ್ನ ಮಾಡಿದರು. ಬಳ್ಳಾರಿಯ ವೆಂಕಟಯ್ಯ ಅಪ್ಪಗೆರೆ ವೇದ ವಿಜ್ಞಾನ ಕವನದ ಮೂಲಕ ಆಧ್ಯಾತ್ಮಿಕತೆ ಹಾಗೂ ವೈಜ್ಞಾನಿಕತೆ ಬಗ್ಗೆ ತಿಳಿಸುತ್ತಾ ವಿಜ್ಞಾನದ ಮಹತ್ವ ತಿಳಿಸಿದರು. ಬೆಂಗಳೂರಿನ ದಮ್ಮೂಡಿ ರಾಮಪ್ಪ ನಾವು ಮನುಷ್ಯರೇ ಕವನದ ಮೂಲಕ ಮಂಗಳಮುಖಿಯರ ಕಡೆಗಣನೆ ಸರಿಯಲ್ಲ ಎಂಬ ಸಂದೇಶ ಸಾರಿದರು.

ಹಬೊಹಳ್ಳಿ ತಾಲೂಕಿನ ಮೇಟಿ ಕೊಟ್ರಪ್ಪ ಅವರು ಉತ್ಸವ ಗೀತೆ ಕವನದ ಮೂಲಕ ಹಂಪಿ ಉತ್ಸವದ ಒಳ ಹೊಳವುಗಳನ್ನು ತೆರೆದಿಟ್ಟರು. ಸಂಡೂರಿನ ಶಾಮಮೂರ್ತಿ ಅಪಾಯದವರು ಕವನದ ಮೂಲ ಮಾದರಿ ವ್ಯಕ್ತಿಗಳ ಮುಖವಾಡ ಕಳಚುವ ಪ್ರಯತ್ನ ಮಾಡಿದರು. ಶಿವಮೊಗ್ಗದ ದಾಳೇಗೌಡ ಅವರ ಬದಲಾಗುವುದಿಲ್ಲ ಕವನದಲ್ಲಿ ಮತ ಬ್ಯಾಂಕ್ ರಾಜಕೀಯ ಅನಾವರಣಗೊಳಿಸಿದರು. ಗಡಿನಾಡು ಕನ್ನಡಿಗ ಎಂ.ಗಿರಿಜಾಪತಿ, ಪತ್ರಕರ್ತ ಬಂಗಿ ಮಂಜುನಾಥ ಹಾಗೂ ಇತರರು ಕವನಗಳನ್ನು ವಾಚಿಸಿದರು. ಕೆಲವು ಕವಿಗಳು ಗೈರಾಗಿದ್ದರು.