ಹೊಸಪೇಟೆ: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಹಾಗೂ ಥೀಮ್ ಪಾರ್ಕ್‌ಗಾಗಿ ಐತಿಹಾಸಿಕ ಹಂಪಿಯಿಂದ ಶುಕ್ರವಾರ ಮೃತ್ತಿಕೆ ಕೊಂಡೊಯ್ಯಲಾಯಿತು.
ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಡಾ.ಸಿ.ಎನ್.ಆಶ್ವತ್ಥ ನಾರಾಯಣ, ಗೃಹ ಸಚಿವ ಆರಗ ಜ್ಣಾನೇಂದ್ರ, ಕಂದಾಯ ಸಚಿವ ಆರ್.ಅಶೋಕ, ಕ್ರೀಡಾ ಸಚಿವ ನಾರಾಯಣಗೌಡ ಅವರು ಐತಿಹಾಸಿಕ ಹಂಪಿಯಲ್ಲಿ ಪಂಪಾ ವಿರೂಪಾಕ್ಷ, ತಾಯಿ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಹಂಪಿಯ ತುಂಗಭದ್ರಾ ನದಿ ತಟದಲ್ಲಿರುವ ಪುಷ್ಕರಣೆಯಿಂದ ೯ ತಾಮ್ರದ ಬಿಂದಿಗೆಗಳಲ್ಲಿ ತುಂಬಿದ್ದ ಮಣ್ಣನ್ನು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸಚಿವರಿಗೆ ಹಸ್ತಾಂತರಿಸಿದರು.
ಇದಕ್ಕೂ ಮುನ್ನ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕಮಲಾಪುರಕ್ಕೆ ಆಗಮಿಸಿದ ಸಚಿವರನ್ನು ಬಿಜೆಪಿ ಮುಖಂಡ ಸಂದೀಪ್ ಸಿಂಗ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು. ಹಂಪಿಗೆ ಆಗಮಿಸುತ್ತಿದ್ದಂತೆ ಸ್ಥಳೀಯ ಗ್ರಾ.ಪಂ. ಸದಸ್ಯೆಯರು ಆರತಿ ಬೆಳಗಿ ಬರಮಾಡಿಕೊಂಡರು. ವಿವಿಧ ಕಲಾಮೇಳಗಳು ಮೆರವಣಿಗೆಯಲ್ಲಿ ಸಚಿವರು ದೇವಸ್ಥಾನಕ್ಕೆ ತಲುಪಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.