ಹೊಸಪೇಟೆ: ದಕ್ಷಣಕಾಶಿ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲದ ರಥಬೀದಿಯ ಎರಡೂ ಬದಿಗಳಲ್ಲಿ ನಿಂತ ನೀರಿನಿಂದ ದುರ್ನಾಥ ಬೀರುತ್ತಿದ್ದು, ಕುಡಿವ ನೀರಿನ ಜತೆ ಸೇರಿ ಆರೋಗ್ಯ ಸಮಸ್ಯೆಗಳು ಬರುವ ಆತಂಕ ಎದುರಾಗಿದೆ.
ಕಳೆದ ಕೆಲ ವರ್ಷದಿಂದ ಹಂಪಿ ರಥ ಬೀದಿಯ ಎರಡೂ ಬದಿಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉತ್ಪನನ ಕಾರ್ಯ ನಡೆಸುತ್ತಿದೆ. ಇದಕ್ಕಾಗಿ ತೋಡಿರುವ ತಗ್ಗುಗಳಲ್ಲಿ ಮಳೆ ನೀರು ನಿಂತು ದುರ್ನಾಥ ಬೀರುತ್ತಿದೆ. ಈ ಸಮಸ್ಯೆ ಕಳೆದ ವರ್ಷವೂ ಎದುರಾಗಿತ್ತು. ಇದರಿಂದ ಪ್ರವಾಸಿಗರಿಗೆ ಇರುಸುಮುರುಸು ಉಂಟಾಗಿತ್ತು. ಈ ಬಗ್ಗೆ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಾರಿಯೂ ಅದೇ ಸಮಸ್ಯೆ ಮರುಕಳಿಸಿದೆ ಎಂದು ಹಂಪಿ ನಿವಾಸಿಗಳು ಅಲವತ್ತುಕೊಂಡಿದ್ದಾರೆ.
ಉತ್ಪನನ ನಡೆಯುತ್ತಿರುವ ಸ್ಥಳದಲ್ಲಿ ಹಂಪಿ ಗ್ರಾಮಕ್ಕೆ ಕುಡಿವ ನೀರಿನ ಸಂಪರ್ಕ ಇರುವ ಪೈಪ್ ಲೈನ್ ಹಾದು ಹೋಗಿದೆ. ಕಳೆದ ನಾಲೈದು ದಿನಗಳಿಂದ ಮಳೆ ನೀರು ನಿಂತು ದುರ್ನಾಥ ಬೀರುತ್ತಿದೆ. ನೀರು ಹೊರ ತೆಗೆಯಲು ಗ್ರಾಮ ಪಂಚಾಯಿತಿ ಪುರಾತತ್ವ ಇಲಾಖೆಗೆ ಮನವಿ ಮಾಡಿದೆ. ಆದರೆ, ಮೋಟಾರ್ ಇದ್ದರೂ ಇದಕ್ಕೆ ಅಗತ್ಯ ವ್ಯವಸ್ಥೆ ಇಲ್ಲ ಎಂದಿದ್ದಾರೆ. ಒಡೆದಿರುವ ಪೈಪ್ ಗಳಲ್ಲಿ ಗಲೀಜು ನೀರು ಸೇರಿ ಸರಬರಾಜು ಆಗುವ ಆತಂಕದಿAದ ಗ್ರಾ.ಪಂ. ನಿಂದ ನೀರು ಸರಬರಾಜು ನಿಲ್ಲಿಸಿ, ನೀರು ಹೊರತೆಗೆಯುವ ಪ್ರಯತ್ನ ಮಾಡುತ್ತಿದ್ದು, ಸಂಬAಧಿಸಿದವರು ಅಗತ್ಯ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಂಪಿ ರಥ ಬೀದಿಯ ಎರಡು ಬದಿಗಳಲ್ಲಿ ಉತ್ಪನನಕ್ಕೆ ತೋಡಿರುವ ಗುಂಡಿಗಳಲ್ಲಿ ನೀರು ನಿಂತಿದೆ. ಈ ನೀರು ದುರ್ನಾಥ ಬೀರುತ್ತಿದ್ದು, ಇದೇ ಸ್ಥಳದಲ್ಲಿ ಹಂಪಿ ನಿವಾಸಿಗಳಿಗೆ ಕುಡಿವ ನೀರಿನ ಪೈಪ್ ಒಡೆದು ಹೊಲಸು ನೀರು ಸರಬರಾಜಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಗಮನಹರಿಸಿಲ್ಲ. ಶೀಘ್ರ ಈ ಸಮಸ್ಯೆ ಬಗೆಹರಿಸಬೇಕು ಎಂದು ಹಂಪಿ ಗ್ರಾ.ಪಂ. ಉಪಾಧ್ಯಕ್ಷ ಹನುಮಂತಪ್ಪ ತಿಳಿಸಿದರು.