ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸೇರಿದಂತೆ ಸುತ್ರಮುತ್ತಲಿನ ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಭಾನುವಾರ ಸಂಜೆ ಮಳೆರಾಯನ ಸಿಂಚನವಾಯಿತು.
ಬೆಳಗ್ಗೆಯಿಂದ ಬಿಸಿಲಿನ ಝಳಕ್ಕೆ ತತ್ತರಿಸಿದ ಜನತೆಗೆ ಸಂಜೆ ಆಗುತ್ತಿದ್ದಂತೆ ಮಳೆಯ ವಾತಾವರಣ ಕಂಡು ಬಂತು. ಸಂಜೆ 4 ರಿಂದ ಮೋಡ ಕವಿದ ವಾತವರಣದಲ್ಲಿ ಗಾಳಿ ಸಹಿತ ಗುಡುಗಿನ ಆರ್ಭಟ ಮುಂದುವರೆದಿತ್ತು. ಸಂಜೆ 4.30ರ ನಂತರ ಗುಡುಗು ಸಿಡಲಿನ ಜತೆ ಕೆಲ ಕಾಲ ಸಾಧಾರಣ ಮಳೆಯಾಗಿದೆ. ಕಮಲಾಪುರ, ಕಡ್ಡಿರಾಂಪುರ, ಮಲಪನಗುಡಿಯಲ್ಲಿ ಸಾಧರಣ ಮಳೆಯಾಗಿದೆ.
ಹಂಪಿಗೆ ಆಗಮಿಸಿದ ಪ್ರವಾಸಿಗರು ಮನೆಯಲ್ಲೇ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಬೈಕ್, ಇನ್ನಿತರ ವಾಹನ ಸವಾರರು ಮಳೆಯಲ್ಲೇ ಸಾಗಿದರು. ಕೆಲವರು ಕೊಡೆ ಆಶ್ರಯಿಸಿದರು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ವಸ್ತುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. ಭಾನುವಾರ ವಾರ ಕನಿಷ್ಠ24, ಗರಿಷ್ಠ 39 ಡಿಗ್ರಿ ತಾಪಮಾನ ದಾಖಲಾಗಿತ್ತು.