ಮಂಗಳೂರು: ನಗರದ ಹೃದಯ ಭಾಗವಾದ ಹಂಪನಕಟ್ಟೆಯ ಹಳೇ ಬಸ್ ನಿಲ್ದಾಣ ಹಾಗೂ ಜಿಎಚ್‌ಎಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದರಿಂದ ಸಾರ್ವಜನಿಕ ಶೌಚಗೃಹಕ್ಕೆ ಹೋಗುವವರಿಗೆ ಹಾಗೂ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಜಿಎಚ್‌ಎಸ್ ರಸ್ತೆಯ ಟೋಕಿಯೋ ಮಾರ್ಕೆಟ್ ಮುಂಭಾಗದಲ್ಲಿ ಶೌಚಗೃಹ ಬಳಿ ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಇದೆ. ಇಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿ ಹ್ಯಾಂಡಲ್ ಲಾಕ್ ಮಾಡಿ ಹೋಗುವುದರಿಂದ ಅಲ್ಲಿ ಮೊದಲೇ ಪಾರ್ಕಿಂಗ್ ಮಾಡಿದವರಿಗೆ ತಮ್ಮ ವಾಹನ ತೆಗೆಯಲೂಆಗದೆ, ಬಂದವರಿಗೆ ಪಾರ್ಕಿಂಗ್ ಮಾಡಲು ಆಗದ ಸ್ಥಿತಿ ಇದೆ.
ಪ್ರಮುಖ ಜನಸಂಚಾರ ಹೊಂದಿರುವ ಇಲ್ಲಿ ಸಾವಿರಾರು ಮಂದಿ ಸಾರ್ವಜನಿಕ ಶೌಚಗೃಹವನ್ನು ಆಶ್ರಯಿಸಿದ್ದಾರೆ. ಇಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನ ಪಾರ್ಕ್ ಮಾಡಿ ಹೋಗುವುದರಿಂದ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಬಂದು ಶೌಚಗೃಹಕ್ಕೆ ಹೋಗಿ ಬರುವುದಾಗಿ ರಸ್ತೆ ಬದಿ ವಾಹನ ನಿಲ್ಲಿಸಿ ಹೋದರೆ ಟೋಯಿಂಗ್ ವಾಹನ ಬಂದು ಬೈಕ್‌ಗಳನ್ನು ಎತ್ತಿಕೊಂಡು ಹೋಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹಳೇ ಬಸ್ ನಿಲ್ದಾಣದಲ್ಲೂ ಸಮಸ್ಯೆ: ಹಂಪನಕಟ್ಟೆಯ ಹಳೇ ಬಸ್ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ ಕಾರು, ಬಸ್‌ಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುತ್ತಾರೆ. ರಾತ್ರಿ ಸಂಚಾರದ ಕೆಲವೊಂದು ಬಸ್‌ಗಳನ್ನು ಹಗಲಿಡೀ ಇಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಸ್ಥಳೀಯ ಕಟ್ಟಡಗಳಲ್ಲಿ ಕೆಲಸ ಮಾಡುವವರು ತಮ್ಮ ಕಾರು, ಬೈಕ್‌ಗಳನ್ನು ಇಲ್ಲಿ ದಿನವಿಡೀ ಪಾರ್ಕ್ ಮಾಡುತ್ತಾರೆ. ಇಲ್ಲಿನ ಶೌಚಗೃಹಕ್ಕೆ ಬರುವವರಿಗೆ ಇದರಿಂದ ಸಮಸ್ಯೆಯಾಗುತ್ತಿದೆ.
ಕೆಲವೊಮ್ಮೆ ಶೌಚಗೃಹದ ಎದುರಲ್ಲೇ ಸಾಲಾಗಿ ಬೇಲಿ ಹಾಕಿದಂತೆ ಬೈಕ್‌ಗಳನ್ನು ಒಂದಕ್ಕೊಂದು ಜೋಡಿಸಿದಂತೆ ಪಾರ್ಕಿಂಗ್ ಮಾಡುತ್ತಾರೆ. ಶೌಚಗೃಹಕ್ಕೆ ಬರಲು ದಾರಿಯೇ ಇರುವುದಿಲ್ಲ. ಪಾವತಿ ಪಾರ್ಕಿಂಗ್ ವ್ಯವಸ್ಥೆ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಿಟ್ಟರೆ ಉಳಿದಂತೆ ನಗರದ ಎಲ್ಲಿಯೂ ಇಲ್ಲ. ಪಾವತಿ ಪಾರ್ಕಿಂಗ್ ಇರುವಲ್ಲಿ ಸಿಬ್ಬಂದಿ ವ್ಯವಸ್ಥಿತವಾಗಿ ಪಾರ್ಕಿಂಗ್ ಮಾಡಿಸುತ್ತಾರೆ.
ಮಂಗಳೂರು ನಗರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿರುವ ವಾಹನ ಪಾರ್ಕಿಂಗ್‌ಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಪಾಲಿಕೆ ಮುಂದಾಗಬೇಕಿದೆ. ಹಂಪನಕಟ್ಟೆಯಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮಾಡುವ ಪ್ರಸ್ತಾವನೆಗೆ ದಶಕವಾಗುತ್ತಾ ಬರುತ್ತಿದೆ. ಆದರೆ ಯಾವುದೇ ಪ್ರಗತಿ ಕಂಡಿಲ್ಲ. ಪ್ರಸ್ತುತ ಖಾಸಗಿ ಸಹಭಾಗಿತ್ವದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಡೆಸುವ ಸುದ್ದಿ ಪ್ರಸ್ತಾವನೆ ಚಾಲ್ತಿಯಲ್ಲಿದೆ.
ಪೂರಕ ಸೌಲಭ್ಯ ಆದ್ಯತೆ ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗುತ್ತಿದ್ದು, ಹಲವು ಕಾಮಗಾರಿಗಳು ಭರದಿಂದ ಸಾಗುತ್ತಿವೆ. ನಗರದ ಹೃದಯ ಭಾಗಗಳಲ್ಲಿ ಪ್ರಮುಖವಾಗಿ ಶೌಚಗೃಹಗಳು ಆಗಬೇಕಾದ ತುರ್ತು ಅಗತ್ಯವಿದೆ. ಇದರೊಂದಿಗೆ ಪೂರಕ ಸೌಲಭ್ಯಗಳು ಪ್ರಮುಖ ಆದ್ಯತೆಯಾಗಿದೆ. ಕ್ಲಾಕ್‌ಟವರ್‌ಗೆ ಕೋಟಿಗಟ್ಟಲೆ ರೂಪಾಯಿ ಸಾರ್ವಜನಿಕರ ಹಣ ಪೋಲು ಮಾಡಿದ್ದಾರೆ. ಅದನ್ನು ಸಾರ್ವಜನಿಕರಿಗೆ ಉಪಯೋಗುವ ಕೆಲಸಗಳಿಗೆ ಬಳಸಿದ್ದರೆ ಒಂದಷ್ಟು ಆತ್ಮ ತೃಪ್ತಿಯಾದರೂ ಸಿಗುತ್ತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಹಂಪನಕಟ್ಟೆಯ ಜಿಎಚ್‌ಎಸ್ ರಸ್ತೆಯಲ್ಲಿರುವ ಶೌಚಗೃಹದ ಬಳಿ ದ್ವಿಚಕ್ರ ವಾಹನ ಪಾರ್ಕಿಂಗ್ ಹೆಚ್ಚಾಗಿರುತ್ತದೆ. ಟೋಯಿಂಗ್ ವಾಹನ ಬರುವಾಗ ವಾಹನಗಳು ರಸ್ತೆಯಲ್ಲಿ ಪಾರ್ಕಿಂಗ್ ಆಗಿದ್ದರೆ ಅವರು ಎತ್ತಿಕೊಂಡು ಹೋಗುತ್ತಾರೆ. ಈಗಾಗಲೇ ಹಲವಾರು ವಾಹನಗಳು ಜಿಎಚ್‌ಎಸ್, ಹಂಪನಕಟ್ಟೆ ಮೊದಲಾದ ಕಡೆಯಿಂದ ಬಂದಿವೆ. ಮಂಜುನಾಥ ಶೆಟ್ಟಿ, ಎಸಿಪಿ, ಸಂಚಾರ ವಿಭಾಗ, ಮಂಗಳೂರು. ಮಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮೇಯರ್-ಉಪ ಮೇಯರ್ ಆಯ್ಕೆಯೂ ನಡೆದಿದೆ. ಅಭಿವೃದ್ಧಿ ಯೋಜನೆಗಳಿಗೆ ಇನ್ನಷ್ಟು ವೇಗ ಸಿಗಲಿದೆ. ಪ್ರಮುಖವಾಗಿ ನಗರದಲ್ಲಿ ಶೌಚಗೃಹ, ಶುದ್ಧ ಕುಡಿಯುವ ನೀರು ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಮನಪಾ