ಜಿಲ್ಲೆ

ಕಾಂಗ್ರೆಸ್ ಪಕ್ಷ ತೆಗಳಿದರೆ, ಬಿಜೆಪಿಗೆ ಹಿನ್ನಡೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ

Shivamurthy Hiremath

ಸಿಂಧನೂರು: ಕಾಂಗ್ರೆಸ್ ಪಕ್ಷವನ್ನು ತೆಗಳಿದಷ್ಟು ಬಿಜೆಪಿಗೆ ಹಿನ್ನಡೆಯಾಗುತ್ತದೆ. ಜನಪರ ಆಡಳಿತ, ಯೋಜನೆ ಜಾರಿಗೊಳಿಸಿದ್ದು ಕಾಂಗ್ರೆಸ್ ಎನ್ನುವುದು ಜನರಿಗೆ ಗೊತ್ತಿದೆ. ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದಿರುವ ಬಿಜೆಪಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.


ತಾಲೂಕಿನ ಬೊಮ್ಮನಾಳ(ಇಜೆ) ಗ್ರಾಮದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ‘ನಮ್ಮ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಆಡಳಿತದಲ್ಲಿ ರಾಜಕೀಯ ಅತ್ಯಂತ ಕೆಳಮಟ್ಟಕ್ಕೆ ಹೋಗಿದೆ. ಯಾವ ವರ್ಗದ ಜನತೆಯೂ ನೆಮ್ಮದಿಯಿಂದ ಇಲ್ಲ. ಆ ಪಕ್ಷಕ್ಕೆ ಅಭಿವೃದ್ಧಿಯ ಮಾನದಂಡಗಳೇ ಇಲ್ಲ. ಕೋಮುಭಾವನೆಗಳನ್ನು ಸೃಷ್ಟಿ ಮಾಡಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜಾಳಿಗೆ ಇಲ್ಲದೇ ಬುಗುರಿ ಆಡಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಭಾಷಣ ಬಿಗಿಯುತ್ತಾರೆ. ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಗಗನಕ್ಕೇರಿವೆ. ಇನ್ನೂ ರೈತರ ಉತ್ಪನ್ನಗಳ ಬೆಲೆ ನೆಲಕಚ್ಚಿವೆ ಎಂದರು.


ಎಲ್ಲ ಕಾಮಗಾರಿಗಳಲ್ಲಿ ಶೇ. 40 ಕಮಿಷನ್ ಅನ್ನು ಶಾಸಕ ವೆಂಕಟರಾವ ನಾಡಗೌಡ ಪಡೆಯುತ್ತಿದ್ದಾರೆ. ಇದರಿಂದ ಎಲ್ಲ ಕಾಮಗಾರಿಗಳೂ ಕಳಪೆಯಾಗಿವೆ. ಪ್ರಸ್ತುತ ರೈತರಿಗೆ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಎಲ್ಲೂ ಧ್ವನಿ ಎತ್ತುತ್ತಿಲ್ಲ. ಈ ವಿಚಾರದಲ್ಲಿ ಶಾಸಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಏ. 15ರ ವರೆಗೆ ರೈತರಿಗೆ ನೀರು ಕೊಡಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಪ್ರಮುಖರಾದ ಲಿಂಗಪ್ಪ ಧಡೇಸುಗೂರು, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಹಗೀರದಾರ, ಸದಸ್ಯ ಶೇಖರಪ್ಪ ಗಿಣಿವಾರ, ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲಿಕ್, ಪ್ರಧಾನ ಕಾರ್ಯದರ್ಶಿ ವೈ.ಅನಿಲಕುಮಾರ, ಅಮರಯ್ಯ ಸ್ವಾಮಿ, ಹನುಮರಡ್ಡೆಪ್ಪ ಲಕ್ಕಂಪುರ, ಪಂಪಣ್ಣ ನಗನೂರು, ಲಿಂಗಪ್ಪ ನಗನೂರು, ಚನ್ನಬಸನಗೌಡ ಮಾಲಿಪಾಟೀಲ್, ಬಸವರಾಜ ಸಾಹುಕಾರ ಕುರಕುಂದಾ, ವಿರುಪನಗೌಡ ಮಾಲಿಪಾಟೀಲ್, ದೊಡ್ಡನಗೌಡ ಮಾಲಿಪಾಟೀಲ್, ದೇವರಡ್ಡಿ ನಗನೂರು, ಶರಣಪ್ಪ ನಗನೂರು, ಶರಣಪ್ಪ ಕುಡದರಾಳ, ವೀರಭದ್ರಪ್ಪ ಅಂಗಡಿ, ರುದ್ರಗೌಡ ಮಾಲಿಪಾಟೀಲ್ ಇತರರು ಇದ್ದರು.