ಜಿಲ್ಲೆ

ಹಾಮಾನಾ ಪ್ರಶಸ್ತಿಗೆ ಡಾ.ಸಂಧ್ಯಾರೆಡ್ಡಿ, ಡಾ.ನಿತ್ಯಾನಂದ ಆಯ್ಕೆ: ಸೆ.28ರಂದು ನಗರದಲ್ಲಿ ಪ್ರದಾನ

ಮಂಡ್ಯ: ಕರ್ನಾಟಕ ಸಂಘ ನೀಡುವ ಡಾ.ಹಾ.ಮಾ.ನಾಯಕ್(ಹಾಮಾನಾ) ಅಂಕಣ ಸಾಹಿತ್ಯ ಹಿರಿಯ ಪ್ರಶಸ್ತಿಗೆ ಅಂಕಣಕಾರ್ತಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮತ್ತು ಅಂಕಣ ಸಾಹಿತ್ಯ ಯುವ ಪ್ರಶಸ್ತಿಗೆ ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ನಿತ್ಯಾನಂದ ಬಿ.ಶೆಟ್ಟಿ ಆಯ್ಕೆಯಾಗಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸೆ.28ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಇಬ್ಬರೂ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂಕಣ ಸಾಹಿತ್ಯ ಹಿರಿಯ ಪ್ರಶಸ್ತಿಯು 50 ಸಾವಿರ ರೂ ನಗದು ಹಾಗೂ ಯುವ ಪ್ರಶಸ್ತಿ 25 ಸಾವಿರ ರೂ. ನಗದನ್ನು ಒಳಗೊಂಡಿದೆ ಎಂದರು.

ಅಂದು ಬೆಳಗ್ಗೆ 11ಗಂಟೆಗೆ ಮೈಸೂರಿನ ಕೆಎಸ್‌ಒಯು ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಪ್ರಶಸ್ತಿ ಪ್ರದಾನ ಮಾಡುವರು. ಉದ್ಯಮಿಗಳಾದ ಬೆಂಗಳೂರಿನ ವಿವೇಕ ಹೆಗ್ಗಡೆ, ಮೈಸೂರಿನ ರಾಜಶೇಖರ ಪತಂಗೆ ಭಾಗವಹಿಸುವರು ಎಂದರು.

ಕರ್ನಾಟಕ ಸಂಘದ ನಿರ್ದೇಶಕ ಎಚ್.ಬಿ.ನಾಗಪ್ಪ ಹನಕೆರೆ ಹಾಜರಿದ್ದರು.