ಜಿಲ್ಲೆ

ಪೊಲೀಸರ ವಿರುದ್ಧ ಹಮಾಲಿ ಕಾರ್ವಿುಕರ ಆಕ್ರೋಶ

Dharwad

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಪ್ರಾಂಗಣದಲ್ಲಿ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದ ಕಾರ್ವಿುಕನಿಗೆ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ ಹಮಾಲಿ ಕಾರ್ವಿುಕರು ಸೋಮವಾರ ಬೆಳಗ್ಗೆ ಕೆಲಕಾಲ ಕೆಲಸ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಆಡಳಿತ ಕಚೇರಿ ಎದುರು ಜಮಾಯಿಸಿದ ನೂರಾರು ಹಮಾಲಿ ಕಾರ್ವಿುಕರು, ಹಲ್ಲೆ ಮಾಡಿ ಬೈದಾಡಿದ ಪೊಲೀಸರ ವಿರುದ್ಧ ಎಪಿಎಂಸಿ ಆಡಳಿತಕ್ಕೆ ದೂರು ನೀಡಿದರು.

ಎಪಿಎಂಸಿ ಆವರಣದ ಗುರುಬಸವ ಟ್ರೇಡರ್ಸ್​ನಲ್ಲಿ ಶನಿವಾರ ರಾತ್ರಿ ಕೆಲಸ ಮುಗಿಸಿದ ನಾಗರಾಜ ಮುಪ್ಪಣ್ಣವರ ಎಂಬ ಕಾರ್ವಿುಕ ಅಲ್ಲಿಯೇ ಊಟ ಮಾಡಿ ತಟ್ಟೆ ತೊಳೆಯಲು ಹೊರಗೆ ಬಂದಾಗ ಬೀಟ್​ನಲ್ಲಿದ್ದ ಪೊಲೀಸರು ಹಲ್ಲೆ ನಡೆಸಿದ್ದಾರೆ.

ಇತರ ಹಮಾಲಿ ಕಾರ್ವಿುಕರು ಪ್ರಶ್ನಿಸಲು ಬಂದರೆ ಅವರಿಗೂ ಬಾಯಿಗೆ ಬಂದಂತೆ ಬೈದು ಕಳಿಸಿದ್ದಾರೆ. ರೈತರ ಫಸಲು ಬಂದಾಗ ಹಗಲು ರಾತ್ರಿ ಎನ್ನದೇ ಹಮಾಲಿ ಕಾರ್ವಿುಕರು ದುಡಿಯುತ್ತಾರೆ. ಹೀಗೆ ಅನಗತ್ಯವಾಗಿ ಪೊಲೀಸರು ಹೊಡೆಯುತ್ತ ಹೋದರೆ ನಮಗೆ ರಕ್ಷಣೆ ಎಲ್ಲಿದೆ? ಎಂದು ಕಾರ್ವಿುಕ ಮುಖಂಡರು ಪ್ರಶ್ನಿಸಿದರು.

ಹಲ್ಲೆ ಮಾಡಿದ ಪೊಲೀಸ್​ರನ್ನು ಕರೆಸಿ ವಿಚಾರಣೆ ಮಾಡಬೇಕು. ಹೊಟ್ಟೆಪಾಡಿಗೆ ದುಡಿಯುವ ಕಾರ್ವಿುಕರ ರಕ್ಷಣೆ ಮಾಡಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿವಿಧ ಕಾರ್ವಿುಕ ಸಂಘಟನೆಯ ಕೆ.ಎನ್. ದಳವಾಯಿ, ಗುರುಸಿದ್ದಪ್ಪ ಅಂಬಿಗೇರ, ಬಸವರಾಜ ನೀರಲಗಿ, ಇತರರು ಮನವಿ ಸಲ್ಲಿಸಿದ್ದಾರೆ.