ಜಿಲ್ಲೆ

ಹಮಾಲರಿಗೂ ಆರ್ಥಿಕ ನೆರವು ನೀಡಲು, ಕಂಪ್ಲಿ ತಹಸೀಲ್ದಾರ್ ಎಂ.ರೇಣುಕಾಗೆ ಫೆಡರೇಷನ್ ಮನವಿ

ಕಂಪ್ಲಿ: ಹಮಾಲಿ ಕಾರ್ಮಿಕರಿಗೂ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿ ಸ್ಥಳೀಯ ಹಮಾಲಿ ಕಾರ್ಮಿಕರ ಫೆಡರೇಷನ್ ಗುರುವಾರ ತಹಸೀಲ್ದಾರ್ ಎಂ.ರೇಣುಕಾಗೆ ಮನವಿ ಸಲ್ಲಿಸಿತು.

ಜಿಲ್ಲಾ ಕಾರ್ಯದರ್ಶಿ ಬಂಡಿ ಬಸವರಾಜ ಮಾತನಾಡಿ, ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಶ್ರಮಜೀವಿಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಅದರಲ್ಲಿ ಹಮಾಲಿ ಕಾರ್ಮಿಕರನ್ನು ಬಿಟ್ಟಿರುವುದು ಬೇಸರದ ಸಂಗತಿ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಪಿಎಂಸಿ, ಗಿರಣಿ, ಟ್ರಾನ್ಸ್‌ಪೋರ್ಟ್, ವೇರ್‌ಹೌಸ್, ಗೋದಾಮು, ಬಸ್ ನಿಲ್ದಾಣ, ಗೂಡ್‌ಶೆಡ್, ನಗರ ಮತ್ತು ಗ್ರಾಮೀಣ ಪೇಟೆಗಳಲ್ಲಿ ಹಮಾಲಿಗಳು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು 40 ಸಾವಿರ ಹಮಾಲಿ ಕಾರ್ಮಿಕರಿದ್ದು, ಇವರಿಗೆ ತಲಾ 5000 ರೂ. ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎನ್.ರಾಜಭಕ್ಷಿ, ಕೆ.ಅಂಬರೀಷ, ಸಣ್ಣ ಬಸವರಾಜ, ನಾಗರಾಜ, ಮಾರೆಣ್ಣ, ಬಸವರಾಜ ಇತರರಿದ್ದರು.