ಬಾಳೆಹೊನ್ನೂರು: ಸಾಹಿತಿ ಹಾ.ಮಾ.ನಾಯಕ್ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಹಾ.ಮಾ.ನಾಯಕ್ ಸಾಹಿತ್ಯ, ಬದುಕು, ಬರಹ ವಿಷಯ ಕುರಿತು ಮಾತನಾಡಿದರು.
ಹಾ.ಮಾ.ನಾಯಕ್ ಅದ್ಭುತ ಸಾಹಿತಿಯಾಗಿದ್ದು ಪ್ರತಿಯೊಬ್ಬರಿಗೂ ಮಾದರಿಯಾಗುವಂತೆ ಬದುಕಿದ್ದರು. ಸಾಹಿತ್ಯದಲ್ಲಿ ನೈಜ ಚಿತ್ರಣ ಬಿಂಬಿಸುತ್ತ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಿದ್ದರು ಎಂದರು.
ಮಹಿಳೆಯರ ಸಾಮಾಜಿಕ ಕಳಕಳಿ ಅವರ ಉನ್ನತಿಗೆ ಪ್ರೇರಕ ಎಂಬ ವಿಷಯ ಕುರಿತು ಜಿಲ್ಲಾ ಸಾಂಸ್ಕೃತಿಕ ರಾಯಭಾರಿ ಕಣಿವೆ ವಿನಯ್ ಮಾತನಾಡಿ, ಮಹಿಳೆ ಪುರುಷನ ಯಶಸ್ಸಿಗೆ ಪ್ರೇರೇಪಣೆಯಾಗಿದ್ದಾಳೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಮಹತ್ವವಿದೆ ಎಂದರು.
ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಮಾತನಾಡಿ, ದತ್ತಿ ಉಪನ್ಯಾಸ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ತಾಯಿಯ ಹೆಸರಿನಲ್ಲಿ ಮತ್ತೊಂದು ದತ್ತಿನಿಧಿ ಸ್ಥಾಪಿಸಲು ಹಣ ನೀಡುವುದಾಗಿ ಭರವಸೆ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ದತ್ತಿ ಉಪನ್ಯಾಸದ ಜತೆಗೆ ಜಾನಪದ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಇದರೊಂದಿಗೆ ಹೋಬಳಿ ಹಾಗೂ ತಾಲೂಕು ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯಬೇಕೆಂಬುದು ನನ್ನ ಆಶಯ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಾದೇಶಿಕ ಸಂಸ್ಥೆಗಳ ಜತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಕಸಾಪ ಪ್ರತಿಭಾವಂತರನ್ನು ಗುರುತಿಸುವ ಬಹುದೊಡ್ಡ ವೇದಿಕೆಯಾಗಿದೆ ಎಂದರು.
ಕಸಾಪ ಹೋಬಳಿ ಘಟಕದ ನೂತನ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ ಅವರಿಗೆ ಧ್ವಜನೀಡಿ ಅಧಿಕಾರ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ದತ್ತಿದಾನಿ ಬಿ.ಎಂ.ಜಯರಾಮ್, ಬಿ.ಎಂ.ಶಿವಣ್ಣಗೌಡ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಮಂಜೇಶ್, ಶ್ರೀನಿವಾಸ್, ಕೆ.ಟಿ.ವೆಂಕಟೇಶ್, ಪ್ರಕಾಶ್, ಜಾಹ್ನವಿ, ಸಾಗರ್ ಇನ್ನಿತರರಿದ್ದರು.