ಮಂಡ್ಯ: ತಾಲೂಕಿನ ಹಳುವಾಡಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಶ್ರೀ ಕಂಚಿನಮಾರಮ್ಮ ದೇವಿಯ ಈರಬ್ಬದ(ದೊಡ್ಡಹಬ್ಬ)ದ ಉತ್ಸವ ವಿಜೃಂಭಣೆಯಿಂದ ನಡೆದು ಸಾವಿರಾರು ಭಕ್ತರು ಪಾಲ್ಗೊಂಡು ದೇವರುಗಳಿಗೆ ಪೂಜೆ ಸಲ್ಲಿಸಿದರು.
ಗ್ರಾಮದ ಶ್ರೀ ಬಂಧುಕಾರಲಿಂಗೇಶ್ವರಸ್ವಾಮಿ ಒಕ್ಕಲು ಮಕ್ಕಳ ಸೇವಾರ್ಥ ಆಯೋಜಿಸಿದ್ದ ಈರಬ್ಬದಲ್ಲಿ ವಿವಿಧ ದೇವರುಗಳಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹಬ್ಬದ ಅಂಗವಾಗಿ ಗ್ರಾಮದ ಬೀದಿಗಳು, ದೇಗುಲಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ತಳಿರುತೋರಣ, ಸ್ವಾಗತ ಕಮಾನು ನಿರ್ಮಿಸಿ ಹಬ್ಬಕ್ಕೆ ಭಕ್ತರನ್ನು ಸ್ವಾಗತಿಸಲಾಯಿತು.
ಶ್ರೀ ಬಂಧುಕಾರಲಿಂಗೇಶ್ವರಸ್ವಾಮಿ, ಶ್ರೀ ಶಂಭುಲಿಂಗೇಶ್ವರಸ್ವಾಮಿ, ಶ್ರೀ ಕನ್ನೇಲಿಂಗೇಶ್ವರ ಸ್ವಾಮಿ , ಶ್ರೀ ಉತ್ತೂರಮ್ಮ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವರುಗಳಿಗೆ ಒಕ್ಕಲು ಮಕ್ಕಳು, ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು.
ನಂತರ ಮಂಗಳವಾರ ದೊಡ್ಡಮುಲಗೂಡು ಕಂಚಿನಮಾರಮ್ಮ ದೇವಸ್ಥಾನದಿಂದ ಮಂಗಳವಾದ್ಯ, ತಮಟೆ ಮತ್ತು ಈರು ಮಕ್ಕಳು ಕೊಳಲು ವಾದ್ಯ ಸಮೇತ ಬೀರೇಶ್ವರಸ್ವಾಮಿ, ಗಾಮನಹಳ್ಳಿ ಹುಚ್ಚರಾಯಸ್ವಾಮಿ ಮತ್ತು ಕಂಚಿನ ಮಾರಮ್ಮ ತಾಯಿ ದೇವರುಗಳನ್ನು ಬಸವ ಕುಂಭಕಾಸೆಗಳೊಂದಿಗೆ ಗ್ರಾಮಕ್ಕೆ ಕರೆತಂದು ಪಟ್ಟಲದಮ್ಮ ತಾಯಿ ದೇವಸ್ಥಾನದಲ್ಲಿರಿಸಿ ದೇವರುಗಳಿಗೆ ಪೂಜೆ ನೆರವೇರಿಸಲಾಯಿತು.
ನಂತರ ಮೂರು ದೇವರುಗಳ ಪೂಜೆ ಕಟ್ಟಿ, ಒಕ್ಕಲಿನ ಹೆಣ್ಣು ಮಕ್ಕಳು ಹೂವು ಹೊಂಬಾಳೆ, ಮಡಿ ಪೂಜೆ ಮುಗಿಸಿದ ನಂತರ ಗ್ರಾಮದ ಬೀದಿಗಳಲ್ಲಿ ತುಂತುರು ಮಳೆ ನಡುವೆ ಇಡೀರಾತ್ರಿ ಪೂಜಾ ಮೆರವಣಿಗೆ ನಡೆಸಲಾಯಿತು. ಈರುಮಕ್ಕಳು ಕುಣಿತ ಗಮನ ಸೆಳೆಯಿತು. ಈ ವೇಳೆ ಬಸವ ಕೂಡ ಮನೆಗಳಿಗೆ ತೆರಳಿದಾಗ ಭಕ್ತರು ಪಾದಪೂಜೆ ನೆರವೇರಿಸಿದರು.
ಮೆರವಣಿಗೆಯಲ್ಲಿ ಗ್ರಾಮಸ್ಥರಿಂದ ದೇವರುಗಳಿಗೆ ಮಹಾಮಂಗಳಾರತಿ ನೆರವೇರಿತು. ಭಕ್ತರಿಗೆ ಪ್ರಸಾದದ ರೂಪದಲ್ಲಿ ಲಾಡು ವಿತರಿಸಲಾಯಿತು. ಶ್ರೀ ಬಂಧುಕಾರಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಉತ್ತೂರಮ್ಮ ದೇವರುಗಳ ಭಾವಚಿತ್ರವನ್ನು ಟ್ರಾಕ್ಟರ್‌ಗೆ ಕಟ್ಟಿ ಹೂವಿನ ಅಲಂಕಾರದೊಂದಿಗೆ ಮೆರವಣಿಗೆ ಮಾಡಲಾಯಿತು.
ಬುಧವಾರ ಬೆಳಗಿನ ಜಾವ ದೇವರುಗಳ ಮೆರವಣಿಗೆ ನಂತರ ಊರ ದೇವಾಲಯದ ಆವರಣದಲ್ಲಿ ಶ್ರೀ ಕಂಚಿಮಾರಮ್ಮದೇವಿ ಮರಿ ಬಲಿ ಪಡೆಯಿತು. ತರುವಾಯ ಗ್ರಾಮದ ಶ್ರೀನಿವಾಸ ಸಮುದಾಯ ಭವನದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೂ ಭಕ್ತರು ಆಗಮಿಸಿ ಅನ್ನಸಂತರ್ಪಣೆ ನೆರವೇರಿತು.
ಅನ್ನಸಂತರ್ಪಣೆಯಲ್ಲಿ ಮುದ್ದೆ, ಗೊಜ್ಜು, ಮಟನ್, ಅನ್ನಸಾರನ್ನು ಪ್ರಸಾದದ ರೂಪದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಸವಿದರು. ಹಳುವಾಡಿ ಗ್ರಾಮವಲ್ಲದೇ ಸುತ್ತಮುತ್ತಲಿನ ತಗ್ಗಹಳ್ಳಿ, ಮಲ್ಲಿಗೆರೆ, ಕಮ್ಮನಾಯಕನಹಳ್ಳಿ, ಪುರ, ಮಂಗಲ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರು. ಅನ್ನಸಂತರ್ಪಣೆಯೊಂದಿಗೆ ಮೂರು ದಿನಗಳ ಈರಬ್ಬ(ದೊಡ್ಡಹಬ್ಬ) ಸಂಪನ್ನವಾಯಿತು.