ರಾಮನಗರ
ಹಳ್ಳಿ ಮಾಳ ವಿಎಸ್‌ಎಸ್‌ಎನ್‌ಗೆ ನಿಗದಿಯಾಗಿರುವ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ, ಹಿಂದಿನ ಚುನಾವಣೆ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನಿರ್ದೇಶಕರನ್ನು ವಜಾ ಮಾಡುವಂತೆ ನಡೆಸುತ್ತಿರುವ ಕಾನೂನು ಹೋರಾಟ ಮುಂದುವರಿಸಲಿದ್ದೇವೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈಎಚ್ ಮಂಜು ಸ್ಪಷ್ಪಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 11 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು 6 ರಲ್ಲಿ ಕಾಂಗ್ರೆಸ್ ಬೆಂಬಲಿತರು, 5ರಲ್ಲಿ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದರು. 2022ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿ, ಅನಸೂಯಮ್ಮ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ನಿರ್ದೇಶಕರಾದ ಸುರೇಶ್ ಮತ್ತು ಕೃಷ್ಣೇಗೌಡ ಎನ್ನುವರು ಚುನಾವಣೆ ಪ್ರಕ್ರಿಯೆಗೆ ಅಡ್ಡಿಪಡಿಸಿ, ಮತ ಪತ್ರ ಹರಿದು ಹಾಕಿದ್ದರು. ಸಭೆಯಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕೋರಂ ಕೊರತೆ ನೆಪ ನೀಡಿ, ಅಧಿಕಾರಿಗಳು ಚುನಾವಣೆ ಮುಂದೂಡಿದ್ದರು ಎಂದರು.
ಇದಾದ ನಂತರ ಅಂದಿನ ರಾಜಕೀಯ ಒತ್ತಡಕ್ಕೆ ಮಣಿದು 15 ದಿನಗಳ ಬದಲಿಗೆ 27 ದಿನಗಳ ನಂತರ ಚುನಾವಣೆ ನಿಗದಿಯಾಗಿ ಸುರೇಶ್ ಎನ್ನುವವರು ಅಧ್ಯಕ್ಷರಾದರು. ಆದರೆ, ಮೊದಲ ಚುನಾವಣೆಗೆ ಸಂಬಂಧಿಸಿದಂತೆ ಸುರೇಶ್ ಮತ್ತು ಕೃಷ್ಣೇಗೌಡ ಅವರ ವಿರುದ್ಧ ಸಹಕಾರ ಇಲಾಖೆಯಲ್ಲಿ ಮತ್ತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಇವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಈ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆವು. ಅದರಂತೆ ಶಾಂತಿ ಸಭೆ ನಡೆಸಿದರೂ ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಜಿಲ್ಲಾಧಿಕಾರಿ ಎರಡು ಬಾರಿ ಮುಂದೂಡಿದ್ದಾರೆ. ಇದರಲ್ಲಿ ಶಾಸಕರು, ಸರ್ಕಾರದ್ದಾಗಲಿ ಯಾವುದೇ ಪಾತ್ರವಿಲ್ಲ ಎಂದು ಮಂಜು ಹೇಳಿದರು.
ಈಗ ಜು.22ಕ್ಕೆ ಮತ್ತೆ ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ. ನಾವು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ, ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ವೈ.ಎಚ್.ಮಂಜು ಸ್ಪಷ್ಟಪಡಿಸಿದರು. ಮಾಜಿ ಶಾಸಕ ಕೆ.ರಾಜು ಮಾತನಾಡಿ, ಈಗಾಗಲೇ ರಾಮನಗರ ಜನತೆ ನಿಮಗೆ ತಕ್ಕ ಪಾಠ ಕಲಿಸಿದ್ದಾರೆ. ರಾಮನಗರ - ಚನ್ನಪಟ್ಟಣ ಅಭಿವೃದ್ಧಿಪಡಿಸಿ ಎಂದರು. ಮುಖಂಡರಾದ ರಮೇಶ್, ಪ್ರಾಣೇಶ್, ಪಾರ್ಥಸಾರಥಿ, ಚೇತನ್‌ಕುಮಾರ್, ಮಂಚೇಗೌಡ ಮುಂತಾದವರು ಇದ್ದರು.
ಸಹಕಾರ ಸಂಘದ ಚುನಾವಣೆಗೆ ದಬ್ಬಾಳಿಕೆ ಪ್ರವೃತ್ತಿ, ಗೂಂಡಾಗಿರಿ ಬಳಕೆ ಆಗಿರಲಿಲ್ಲ. ಆದರೆ, ಈಗ ನಿಖಿಲ್ ಕುಮಾರಸ್ವಾಮಿ ಅವರು ಎಆರ್ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ಬೆದರಿಸಿ ಹಾಸನದ ಪದ ಬಳಕೆ ಮೂಲಕ ಅವಾಚ್ಯವಾಗಿ ನಿಂದಿಸಿ ದಿನಾಂಕ ನಿಗದಿ ಮಾಡಿಸಿಕೊಂಡಿದ್ದಾರೆ. ಇಂತಹ ನಡವಳಿಕೆ ಸರಿಯಲ್ಲ ಎಂದು ಮಾಜಿ ಶಾಸಕ ಸಿ ಎಂ.ಲಿಂಗಪ್ಪ ಹೇಳಿದರು.