ಬಾಗೇಪಲ್ಲಿ: ಸ್ಥಳೀಯ ಕುಲಕಸಬುದಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದ್ದು, ಯೋಜನೆಯಡಿ ಸೌಲಭ್ಯಕ್ಕಾಗಿ ಸಲ್ಲಿಸಿದ್ದ ಸಾವಿರಾರು ಅರ್ಜಿಗಳು ಆನ್‌ಲೈನ್‌ನಲ್ಲೇ ಧೂಳುಮೆತ್ತಿಕೊಂಡಿವೆ.
ಬಾಗೇಪಲ್ಲಿಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಕಮ್ಮಾರ, ಕಲ್ಲು ಒಡೆಯುವವರು, ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು, ಬೀಗ ರಿಪೇರಿ, ಅಕ್ಕ ಸಾಲಿಗ, ಕುಂಬಾರ, ಚಮ್ಮಾರ ಕುಶಲಕರ್ಮಿ, ಮೇಸ್ತ್ರಿ, ಬುಟ್ಟಿ, ಚಾಪೆ, ಪೊರಕೆ, ಬೊಂಬೆ ಮತ್ತು ಅಟಿಕೆ ತಯಾರಕರು, ಕ್ಷೌರಿಕ, ಹೂವು ವ್ಯಾಪಾರ, ಮಡಿವಾಳ, ದರ್ಜಿ, ಮೀನಿನ ಬಲೆ ಸಿದ್ಧಪಡಿಸುವವರು ಸೇರಿ ವಿವಿಧ ಕುಲಕಸಬುಗಳಲ್ಲಿ ತೊಡಗಿಸಿಕೊಂಡವರು ಸಲ್ಲಿಸಿದ್ದ ಸುಮಾರು 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಶ್ವಕರ್ಮ ಪೋರ್ಟಲ್‌ನಲ್ಲೇ ಇದ್ದು, ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಿಗೆ ಬಾಗೇಪಲ್ಲಿ ತಾಲೂಕಿನಲ್ಲಿ ಎಳ್ಳುನೀರು ಬಿಟ್ಟಂತಾಗಿದೆ.
ಬಾಗೇಪಲ್ಲಿ ಪುರಸಭೆ ಹಾಗೂ ತಾಲೂಕಿನ 25 ಗ್ರಾಮ ಪಂಚಾಯತಿಗಳಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸೌಲಭ್ಯಕ್ಕಾಗಿ ಒಟ್ಟು 3,041 ಕುಶಲಕರ್ಮಿಗಳು ನೋಂದಣಿ ಮಾಡಿಕೊಂಡಿದ್ದಾರೆ, ಈ ಪೈಕಿ 2023ರ ಡಿಸೆಂಬರ್‌ನಿಂದ ಇದುವರೆಗೆ ಬರೀ 107 ಅರ್ಜಿಗಳನ್ನು ಪರಿಶೀಲಿಸಿದ್ದು, ಉಳಿದ 2,934 ಅರ್ಜಿಗಳು ಪರಿಶೀಲನೆಯಾಗದೆ ವಿಶ್ವಕರ್ಮ ಪೋರ್ಟಲ್‌ನಲ್ಲಿ ಹಾಗೇ ಉಳಿದಿವೆ. ಅದರಲ್ಲೂ ಬಾಗೇಪಲ್ಲಿ ಪುರಸಭೆಯಲ್ಲಿ 401 ಕುಶಲಕರ್ಮಿಗಳು ನೋಂದಣಿ ಮಾಡಿಸಿಕೊಂಡಿದ್ದು, 294 ಅರ್ಜಿಗಳು ನೋಂದಣಿ ಹಂತದಲ್ಲೇ ಬಾಕಿ ಉಳಿದುಕೊಂಡಿವೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅನುಷ್ಠಾನ ಹೊಣೆ ಹೊತ್ತಿರುವ ಡೇ-ಎನ್.ಯು.ಎಲ್.ಎಂ ವಿಭಾಗದ ಅಧಿಕಾರಿಗಳು ಬಾಗೇಪಲ್ಲಿ ತಾಲೂಕಿನಲ್ಲಿ ನಿಷ್ಕ್ರಿಯಗೊಂಡಂತಿದ್ದಾರೆ.
ಅದೇಶಕ್ಕೆ ಕವಡೆ ಕಿಮ್ಮತ್ತಿಲ್ಲ
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅನುಕೂಲಗಳ ಬಗ್ಗೆ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಮಗ್ರವಾಗಿ ತಿಳಿಸುವುದು, ಜಾಗೃತಿ ಮೂಡಿಸುವುದು, ಆರ್ಹತೆ ಆಧಾರದ ಮೇಲೆ ಸದಸ್ಯರನ್ನು ಗುರುತಿಸಿ, ವಿಶ್ವಕರ್ಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸುವುದಲ್ಲದೆ, ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಇಲಾಖೆಯ ಬೆಂಗಳೂರು ಕಚೇರಿಯ ಅಭಿಯಾನದ ನಿರ್ದೇಶಕಿ ಪಿ.ವಿ.ಶ್ರೀವಿದ್ಯಾ 2023ರ ನವಂಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲೂಕು, ಸ್ಥಳೀಯ ಮಟ್ಟದ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಬಾಗೇಪಲ್ಲಿ ತಾಲೂಕಿನ ಡೇ-ಎನ್.ಯು.ಎಲ್.ಎಂ ವಿಭಾಗದ ಅಧಿಕಾರಿಗಳು ಯೋಜನೆ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಹತೆ ಆಧಾರದಡಿ ಪ್ರಧಾನಮಂತ್ರಿ ವಿಶ್ವಕರ್ಮ, ಮುದ್ರಾ ಮತ್ತು ಪಿಎಂ ಸ್ವ-ನಿಧಿ ಯೋಜನೆಯಡಿ ಕುಶಲ ಕರ್ಮಿಗಳಿಗೆ, ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರಿಗೆ ಸಾಲ ಸೌಲಭ್ಯ ಕಲ್ಪಿಸಿದೆ, ಅದರೇ ಸ್ಥಳೀಯ ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸದೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಬಾಗೇಪಲ್ಲಿ ತಾಲೂಕಿನಿಂದ ನೋಂದಣಿ ಆಗಿರುವ 4 ಸಾವಿರ ಅರ್ಜಿಗಳು ಪ್ರಧಾನಮಂತ್ರಿ ವಿಶ್ವಕರ್ಮ ಆನ್‌ಲೈನ್ ತಂತ್ರಾಂಶದಲ್ಲಿ ದೂಳು ಹಿಡಿಯುತ್ತಿವೆ." - ಸಿ.ಮುನಿರಾಜು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬಾಗೇಪಲ್ಲಿ "ಬಾಗೇಪಲ್ಲಿ ಪಟ್ಟಣದಲ್ಲಿ ಪತ್ರಿಕಾ ವಿತರಕನಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು ಮುದ್ರಾ ಯೋಜನೆಯಡಿ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿ 1 ವರ್ಷ ಕಳೆದಿದೆ. ಇದುವರೆಗೂ ಸೌಲಭ್ಯ ನನ್ನ ಕೈಸೇರಿಲ್ಲ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅರ್ಜಿಗಳನ್ನು ಪರಿಶೀಲಿಸಿ ಯೋಜನೆಯ ಅನುಷ್ಠಾನಕ್ಕೆ ಕ್ರಮವಹಿಸಬೇಕು." - ಹೆಸರು ಹೇಳಲು ಇಚ್ಛಿಸದ ಪತ್ರಿಕಾ ವಿತರಕ ಬಾಗೇಪಲ್ಲಿ