ಹಳಿಯಾಳ: ತಾಲೂಕಿನಾದ್ಯಂತ ಕಳೆದ 5 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಹುತೇಕ ಕೆರೆಗಳು, ಸಣ್ಣಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳಿಯಾಳದಿಂದ ಚಿಬ್ಬಲಗೇರಿಗೆ ತೆರಳುವ ಮಾರ್ಗದಲ್ಲಿನ ಹಳ್ಳವೊಂದು ಸಂಪೂರ್ಣ ಭರ್ತಿಯಾಗಿ ಸೇತುವೆಯ ಮೇಲೆ ರಸ್ತೆಯ ಮೇಲೆ 3 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ದ್ವಿಚಕ್ರ ಮತ್ತು ಸಣ್ಣ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಪಟ್ಟಣದ ಹೊರಗಿನ ಗುತ್ತಿಗೇರಿ ಕೆರೆ, ಮುಂಡವಾಡ, ಜಾವಳ್ಳಿ, ಯಡೋಗಾ, ತೆಗ್ನಳ್ಳಿ ಸೇರಿದಂತೆ ಬಹುತೇಕ ಎಲ್ಲ ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದ್ದು, ರೈತ ಸಮುದಾಯದಲ್ಲಿ ಸಂತಸವನ್ನುಂಟು ಮಾಡಿದೆ.