ಹಳಿಯಾಳ ಕೆ ಎಲ್ ಎಸ್ ವಿ ಡಿ ಐ ಟಿ ಮಹಾವಿದ್ಯಾಲಯವು ಪಂಜಾಬಿನ ಲ್ಯಾಮರಿನ್ ಟೆಕ್ ಸ್ಕಿಲ್ ವಿಶ್ವವಿದ್ಯಾಲಯದೊಂದಿಗೆ ಜುಲೈ 3 ರಂದು ಒಡಂಬಡಿಕೆ ಮಾಡಿಕೊಂಡಿದೆ ಎಂದು
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ತಿಳಿಸಿದ್ದಾರೆ.
ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಲ್ಯಾಮರಿನ್ ಟೆಕ್ ಸ್ಕಿಲ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ ಬಿ ಗುರುರಾಜ್ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಗೊಳಿಸುವುದರ ಮೂಲಕ ಉದ್ಯೋಗಾವಕಾಶ ಸೃಷ್ಟಿ ಮಾಡುವ ಉದ್ದೇಶದಿಂದ ವಿ ಡಿ ಐ ಟಿ ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ತಮ್ಮ ವಿಶ್ವವಿದ್ಯಾಲಯವು ಕೌಶಲ್ಯ ಅಭಿವೃದ್ಧಿಪಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ ಎಂದು ತಿಳಿಸಿದರು. ಈ ಒಡಂಬಡಿಕೆಯಿಂದ ವಿದ್ಯಾರ್ಥಿಗಳು ಕೈಗಾರಿಕಾ ಕ್ಷೇತ್ರ ಬಯಸುವ ಕೌಶಲ್ಯವನ್ನು ಹೊಂದಲು ಸಹಕಾರಿಯಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಕುಲಕರ್ಣಿ ಲ್ಯಾಮರಿನ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಹೊಂದಿದ ಉತ್ತರ ಕರ್ನಾಟಕದ ಏಕೈಕ ತಾಂತ್ರಿಕ ಮಹಾವಿದ್ಯಾಲಯ ವಿ ಡಿ ಐ ಟಿ ಆಗಿರುವುದು ಸಂತಸದ ವಿಷಯ ಎಂದರು.
ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ಈ ಒಡಂಬಡಿಕೆಯು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಪುಷ್ಟಿ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿ ಆರ್ ಡಿ ಎಂ ಟ್ರಸ್ಟ್ ನ ಆಡಳಿತ ಅಧಿಕಾರಿ ಪ್ರಕಾಶ್ ಪ್ರಭು ಲ್ಯಾಮರಿನ್ ಟೆಕ್ ಸ್ಕಿಲ್ ಯೂನಿವರ್ಸಿಟಿಯ ಪದಾಧಿಕಾರಿಗಳು ಇದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಕೆ ಎಸ್ ಪೂಜಾರ್ ಸ್ವಾಗತಿಸಿದರು. ಪ್ರೊ. ಬಿ ಬಿ ಪಾಟೀಲ್ ವಂದಿಸಿದರು. ಪ್ರೊ. ನವೀನ್ ಹಿರೇಮಠ ನಿರೂಪಿಸಿದರು.