ಜಿಲ್ಲೆ

ಹಳಿಯಾಳ ಕಬ್ಬಿನ ಕಾರ್ಖಾನೆಯ ಜಂಟಿ ಸಮೀಕ್ಷೆ ನಡೆಸಲು ಉತ್ತರ ಕನ್ನಡ, ಧಾರವಾಡ ಡಿಸಿಗಳಿಗೆ ಸೂಚನೆ

Uttara Kannada - Subash Hegde

ಹಳಿಯಾಳ: ಹೆಚ್ಚುವರಿಯಾಗಿ ಆಕರಿಸಿದ ಕಟಾವು ಹಾಗೂ ಸಾಗಣೆ ವೆಚ್ಚ ಮರು ಪಾವತಿ, ಕಾರ್ಖಾನೆಯ ಆವರಣದ ಹೊರಗೆ ತೂಕದ ಯಂತ್ರ ಅಳವಡಿಕೆ ಸೇರಿದಂತೆ ಕಬ್ಬು ಬೆಳೆಗಾರರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹಳಿಯಾಳ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಅಽಕಾರಿಗಳಿಗೆ ಸೂಚಿಸಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ರೈತ ಮುಖಂಡರು, ಬೆಂಗಳೂರಿನ ವಿಕಾಸ ಸೌಧದಲ್ಲಿ ರೈತರ ನಿಯೋಗವು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಯಿತು. ಲಾಡ್ ಅವರು ರೈತರ ನಿಯೋಗದ ಜತೆ ಬೆಳಗಾವಿ ಜಿಲ್ಲಾಽಕಾರಿ ದಿವ್ಯಾ ಪ್ರಭು, ಸಕ್ಕರೆ ಆಯುಕ್ತರ ಕಚೇರಿಯ ಪ್ರತಿನಿಽ ಸಿ.ಪಿ.ಪಾಟೀಲ ಹಾಗೂ ಪ್ಯಾರಿ ಕಾರ್ಖಾನೆಯ ರಮೇಶ ರೆಡ್ಡಿ, ಶಂಕರಲಿಂಗ ಅಗಡಿ ಅವರನ್ನು ಕರೆಸಿ ಜಂಟಿ ಸಭೆ ನಡೆಸಿದರು ಎಂದು ಮಾಹಿತಿ ನೀಡಿದ್ದಾರೆ.

ಕಾರ್ಖಾನೆಯು ಕಟಾವು ಹಾಗೂ ಸಾಗಣೆ ವೆಚ್ಚ (ಎಚ್ ಆ್ಯಂಡ್ ಟಿ) ಹೆಚ್ಚುವರಿಯಾಗಿ ಆಕರಿಸಿದ್ದು, ಪ್ರತಿ ಟನ್‌ಗೆ 256 ರೂ.ಗಳನ್ನು ರೈತರಿಗೆ ಮರು ಪಾವತಿ ಮಾಡುವಂತೆ ಸಕ್ಕರೆ ಆಯುಕ್ತರು ಆದೇಶ ಮಾಡಿದ್ದರೂ ಕಾರ್ಖಾನೆ ರೈತರಿಗೆ ಹಣ ಮರುಪಾವತಿ ಮಾಡಿಲ್ಲ. ತೂಕದಲ್ಲಿ ಪಾರದರ್ಶಕತೆ ಇಟ್ಟುಕೊಳ್ಳಲು ಕಬ್ಬು ಯಂತ್ರವನ್ನು ಕಾರ್ಖಾನೆಯ ಹೊರಗೆ ಸ್ಥಾಪನೆ ಮಾಡುವಂತೆ ಕಳೆದ ವರ್ಷವೇ ಉಕ ಜಿಲ್ಲಾಽಕಾರಿಗಳು ಆದೇಶ ಮಾಡಿದ್ದರೂ ಅದನ್ನು ಕಾರ್ಖಾನೆ ಪಾಲಿಸಿಲ್ಲ ಎಂದು ವಿವರಿಸಲಾಯಿತು.

ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲಾಽಕಾರಿಗಳು ಕಾರ್ಖಾನೆಗೆ ಜಂಟಿಯಾಗಿ ತೆರಳಿ ಸ್ಥಳ ಪರಿಶೀಲನೆ ನಡೆಸಿ, ಎನ್ ಆ್ಯಂಡ್ ಟಿ ಮರುಪಾವತಿ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು. ಯಾವುದೇ ಕಾರಣಕ್ಕೆ ಹೊರಗಿನಿಂದ ಗ್ಯಾಂಗ್(ಕಟಾವು ಮಾಡುವ ಕಾರ್ಮಿಕರ ತಂಡ) ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಸಚಿವರು ಆದೇಶ ಮಾಡಿದರು ಎಂದು ರೈತ ಮುಖಂಡರು ಮಾಹಿತಿ ನೀಡಿದ್ದಾರೆ.

ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಸ್ವಾರ್ಥ ಮನಸ್ಥಿತಿಯೇ ಸಮಸ್ಯೆ ಬಗೆಹರಿಯದೇ ಇರಲು ಕಾರಣ. ರೈತರ ಶ್ರೇಯೋಭಿವೃದ್ಧಿಗಾಗಿ ಕಾರ್ಖಾನೆ ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಅಽಕಾರಿಗಳ ಹಾದಿ ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸಚಿವರ ಪ್ರಶ್ನೆಗಳಿಗೆ ಕಾರ್ಖಾನೆಯ ಅಽಕಾರಿಗಳು ನಿರುತ್ತರರಾದರು ಎಂದು ರೈತರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಪ್ರಮುಖರಾದ ಸಂದೀಪ ಕುಮಾರ ಬೊಬಾಟಿ, ಮಹೇಶ ಬೆಳಗಾಂವಕರ, ನಾಗೇಂದ್ರ ಜಿವೊಜಿ,ಪರಶುರಾಮ ಯತ್ತಿನಗುಡ್ಡ, ಪ್ರಕಾಶ ಪಾಕರೆ, ಉಳವಪ್ಪ ಬಳಿಗೆಕರ,ಬಸನಗೌಡ ಶಿದ್ದನಗೌಡರ, ರಾಮದಾಸ ಬೆಳಗಾಂವಕರ, ಬಳಿರಾಮ ಮೋರೆ, ಶಿವು ತಡಸ,ವಸಂತ ಡಾಕಪ್ಪನವರ, ಮಲ್ಲಪ್ಪ ಹೊನ್ನಿಹಳ್ಳಿ, ಬಸವಣೆಪ್ಪ ಅದರಗುಂಚಿ, ಸಹದೇವ ಕುಂಬಾರ, ನಾರಾಯಣ ನೆಸ್ರೇಕರ್ ಉಪಸ್ಥಿತರಿದ್ದರು.