ಜಿಲ್ಲೆ

ಪರಿಸರಸ್ನೇಹಿ ಯೋಜನೆ ಹೆಚ್ಚು ಬರಲಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಹಳಿಯಾಳ: ಪರಿಸರಸ್ನೇಹಿ ಯೋಜನಾ ಕಾರ್ಯಗಳನ್ನು ಹೆಚ್ಚು ಕಾರ್ಯರೂಪಗೊಳಿಸಬೇಕು ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಯು.ಟಿ. ವಿಜಯ ಹೇಳಿದರು.
ಪಟ್ಟಣದ ಕೆಎಲ್‌ಎಸ್‌ವಿಡಿಐಟಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬೌದ್ಧಿಕ ಆಸ್ತಿಯ ಹಕ್ಕುಗಳ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕೆಎಸ್‌ಸಿಎಸ್‌ಟಿ ಸಹ ಸಂಯೋಜಕ ನಾಗಾರ್ಜುನ ಎಂ.ಜಿ., ಪ್ರಿಯಾಂಕ, ಅನಿಲ ನಾಯಕ ವಿವಿಧ ಪ್ರಕಾರದ ಕೃತಿಸ್ವಾಮ್ಯ ಹಾಗೂ ಬೌದ್ಧಿಕ ಆಸ್ತಿಯ ಹಕ್ಕುಗಳ ಕುರಿತು ವಿವರಣೆ ನೀಡಿದರು.
ಬೌದ್ಧಿಕ ಆಸ್ತಿ ಕುರಿತಾಗಿ ಹೆಚ್ಚಿನ ಚಟುವಟಿಕೆ ಕುರಿತು ಪರಿಷತ್‌ನೊಂದಿಗೆ ಮಹಾವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿತು.
ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಮಾತನಾಡಿ, ಈಗಾಗಲೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳು 25ಕ್ಕೂ ಹೆಚ್ಚು ಪೇಟೆಂಟ್ ದಾಖಲಿಸಿದ್ದು, ಪ್ರತಿಷ್ಠಿತ ಕೆಎಸ್‌ಸಿಎಸ್‌ಟಿಯೊಂದಿಗಿನ ಒಡಂಬಡಿಕೆಯು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗಲಿದೆ. ವಿದ್ಯಾರ್ಥಿ ಮತ್ತು ಶಿಕ್ಷಕರ ಸೃಜನಾತ್ಮಕ ಕಲ್ಪನೆಗಳನ್ನು ಅನುಷ್ಠಾನಕ್ಕೆ ತರಲು ಸಹಕಾರಿಯಾಗಲಿದೆ ಎಂದರು.
ಮಹಾವಿದ್ಯಾಲಯದ ಡೀನ್ ಡಾ. ಗುರುರಾಜ ಹತ್ತಿ, ರಜತ ಆಚಾರ್ಯ, ಡಾ. ಶೈಲೇಶ ಚನ್ನಪಟ್ಟಣ, ರೋಹಿಣಿ ಕಲ್ಲೂರ ಕಾರ್ಯಕ್ರಮ ಸಂಯೋಜಿಸಿದ್ದರು.