ಚಿಕ್ಕಬಳ್ಳಾಪುರ: ರೈತರು ಕಷ್ಟಪಟ್ಟು ಬೆಳೆಯನ್ನು ಬೆಳೆದಿದ್ದರು. ಆದರೆ, ಇದು ಅಧಿಕಾರಿಗಳ ಅರ್ಧಂಬರ್ಧ ಕಾಮಗಾರಿ ಕೆಲಸ, ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ನೀರಿನಲ್ಲಿ ಹೋಮ ಮಾಡಿದಂತೆ ಸಂಪೂರ್ಣ ನಾಶವಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ವೃತ್ತದ ಬದಿಯಲ್ಲಿರುವ ಜಮೀನುಗಳಿಗೆ ಅರೆಬರೆ ಕಾಮಗಾರಿಯಿಂದಾಗಿ ಮಳೆ ನೀರು ಜಮೀನುಗಳಿಗೆ ನುಗ್ಗಿದೆ. ಇದರಿಂದ ಬೆಳೆಗಳು ನಾಶವಾಗಿದ್ದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರದ್ದೋ ನಿರ್ಲಕ್ಷ್ಯಕ್ಕೆ, ಇನ್ನೂ ಯಾರೋ ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
*ರೈತರ ಆರೋಪವೇನು?
ಪೋಶೆಟ್ಟಿಹಳ್ಳಿ ವೃತ್ತದ ಬಳಿ ರಸ್ತೆ ಮತ್ತು ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಚರಂಡಿ ಮಾಡುವಾಗ ಒಂದೆರಡು ಕಂಬಗಳು ಅಡ್ಡ ಇರುವ ಆ ಜಾಗಗಳಲ್ಲಿ ಬಿಟ್ಟು, ಉಳಿದ ಜಾಗದಲ್ಲಿ ಚರಂಡಿ ನಿರ್ಮಿಸಲಾಗಿದೆ. ಇನ್ನೂ ಕಂಬಗಳನ್ನು ಸ್ಥಳಾಂತರಿಸಿದ ಮೇಲೆ ಚರಂಡಿ ಕೆಲಸವನ್ನು ಪೂರ್ಣಗೊಳಿಸದೇ ಬೇಜವಾಬ್ದಾರಿಯಿಂದ ಹಾಗೆಯೇ ಬಿಡಲಾಗಿದೆ. ಇದರಿಂದ ಮಳೆ ಬಿದ್ದ ಸಂದರ್ಭದಲ್ಲಿ ನೀರು ಸಮೀಪದ ಜಮೀನುಗಳಿಗೆ ನುಗ್ಗಿದೆ. ತೋಟಗಳು ಜಲಾವೃತಗೊಂಡು ಬೆಳೆಗಳು ಹಾಳಾಗಿವೆ ಎಂದು ರೈತರು ಆರೋಪಿಸಿದ್ದಾರೆ.
ಅರ್ಧಂಬರ್ಧ ರಸ್ತೆ ಕಾಮಗಾರಿ, ಕೆಲಸ ಕೈಗೊಂಡವರ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ನಮ್ಮ 2 ಎಕರೆ ನಮ್ಮ ಜಮೀನಿಗೆ ಮಳೆಯ ನೀರು ಹರಿದು ಜೋಳ ಮತ್ತು ತೊಗರಿ ಬೆಳೆ ಹಾಳಾಗಿದೆ ಎಂದು ಲಕ್ಷ್ಮೀನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.