ಹರಿಹರ: ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಶುಕ್ರವಾರ ಬೆಳಗ್ಗೆ ನಗರಸಭೆ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.
ನಗರದ 31 ವಾರ್ಡ್‌ಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸರಿಪಡಿಸುವಂತೆ ಹಲವು ಬಾರಿ ಹೋರಾಟ ಮಾಡಿ, ಮನವಿ ನೀಡಿದರೂ ನಗರಸಭೆ ನಿರ್ಲಕ್ಷೃ ವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೋಹನ್ ಗೌಡ ಮಾತನಾಡಿ, ನಗರದಲ್ಲಿ ಯುಜಿಡಿ ಮತ್ತು ಜಲಸಿರಿ ಯೋಜನೆ ಕಾಮಗಾರಿಯಿಂದ ರಸ್ತೆಗಳು ಗುಂಡಿಮಯವಾಗಿದೆ. ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಎನ್ನುವಷ್ಟರ ಮಟ್ಟಿಗೆ ಹಾಳಾಗಿದೆ ಎಂದು ದೂರಿದರು.
ಸಂಘದ ಗೌರವಾಧ್ಯಕ್ಷ ಸಿದ್ದಲಿಂಗಸ್ವಾಮಿ ಮಾತನಾಡಿ, ರಸ್ತೆ ದುರಸ್ತಿಗೆ ಮನವಿ ಮಾಡಿದಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿ ಕೈತೊಳೆದುಕೊಳ್ಳುತ್ತಾರೆ ವಿನಾ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ. ಇದರಿಂದ ನಮ್ಮ ಸಹನೆಯ ಕಟ್ಟೆ ಒಡೆದಿದ್ದು, ಈ ಕೂಡಲೇ ರಸ್ತೆ ದುರಸ್ತಿ ಮಾಡದಿದ್ದರೆ ಹೋರಾಟ ಉಗ್ರ ಸ್ವರೂಪ ತಾಳಲಿದೆ ಎಂದು ಎಚ್ಚರಿಸಿದರು.
ಪೌರಾಯುಕ್ತರು ಎಂಟು ದಿನಗಳಲ್ಲಿ ರಸ್ತೆಗಳ ದುರಸ್ತಿ ಮಾಡಿಸುತ್ತೇನೆ ಎಂದು ಭರವಸೆ ನೀಡುತ್ತಿದ್ದಾರೆ. ಆದರೆ, ನಾವು ಹದಿನೈದು ದಿನ ಕಾಯುತ್ತೇವೆ. ಅಷ್ಟರಲ್ಲಿ ಕಾಮಗಾರಿ ಪ್ರಾರಂಭ ಮಾಡದಿದ್ದರೆ ನಗರದ ಎಲ್ಲ ಸಂಘ ಸಂಸ್ಥೆಗಳೊಂದಿಗೆ ನಗರಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ನಗರಸಭೆಗೆ ಬಂದಿರುವ ಅನುದಾನದಲ್ಲಿ ನಗರದ ಎಲ್ಲ ವಾರ್ಡ್ ರಸ್ತೆಗಳ ದುರಸ್ತಿಗಾಗಿ ಈಗಾಗಲೇ ಕ್ರಿಯಾ ಯೋಜನೆ ಸಿದ್ಧವಾಗಿದೆ. ಸರ್ಕಾರ ಅನುಮೋದನೆಗೆ ಕಳುಹಿಸಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪುರ, ಉಪಾಧ್ಯಕ್ಷ ಕೆ.ಜಿ. ಸಿದ್ದೇಶ್, ಸದಸ್ಯ ಆರ್.ಸಿ. ಜಾವಿದ್, ನಗರಸಭಾ ಸದಸ್ಯ ಹಾಗೂ ಆಟೋ ಚಾಲಕ ಹನುಮಂತಪ್ಪ, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಕೇಶವ, ಕಾರ್ಯದರ್ಶಿ ತಿಪ್ಪೇಶ, ಬಿ.ಎಂ. ರುದ್ರೇಶ್, ಸಿಖಂದರ್, ನೂರ್ ಆಹಮ್ಮದ್, ಆರ್. ಸೋಮನಾಥ್, ಶೇಖ್ ಅಲ್ತಾಫ್, ಮಂಜುನಾಥ್ ಅಗಡಿ ಮತ್ತಿತರರಿದ್ದರು.