ಹುಬ್ಬಳ್ಳಿ: ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಂಬಂಧ ಯಂಗ್ ಇಂಡಿಯನ್ಸ್, ಕೆಎಂಸಿಆರ್ಐ, ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಆಂತರ್ಯ ನರ-ಮನೋರೋಗ ಸಂಸ್ಥೆ ಸೇರಿ ಇತರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಗರದಲ್ಲಿ ಅ. 27ರಂದು ಬೆಳಗ್ಗೆ 6.30ಕ್ಕೆ 2ಕಿ.ಮೀ. ಮತ್ತು 5 ಕಿ.ಮೀ. ಹಾಫ್ ಮ್ಯಾರಥಾನ್ ಏರ್ಪಾಟಾಗಿದೆ.
ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೆಎಂಸಿಆರ್ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಪ್ರಾಚಾರ್ಯ ಡಾ. ಗುರುಸಿದ್ದಪ್ಪ ಯಲಗಚ್ಚಿನ, ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಸೋಮಶೇಖರ ಬಿಜ್ಜಳ ಅತಿಥಿಗಳಾಗಿ ಆಗಮಿಸುವರು. ಹಾಫ್ ಮ್ಯಾರಥಾನ್, ನಗರದ ಕೆಎಂಸಿಆರ್ಐ ಆವರಣದಿಂದ ತೋಳನಕೆರೆ ಮತ್ತೆ ತೋಳನಕೆರೆಯಿಂದ ಕೆಎಂಸಿಆರ್ಐವರೆಗೆ ನಡೆಯಲಿದೆ. ಧಾರವಾಡ, ಬೆಳಗಾವಿ, ಹಾವೇರಿ, ಗದಗ ಸೇರಿ ಇತರ ಜಿಲ್ಲೆಯಿಂದ 650ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.